ನಾನಾ ಅವತಾರದಲ್ಲಿ ಕಂಗೊಳಿಸಿದ ಗಣಪ

ganapa
ವಿನೋಬ ನಗರದ ಐರಾವತ ಗೆಳೆಯರ ಬಳಗದವರಿಂದ ವಿಶೇಷ ಅಲಂಕಾರ.
Published on

ಶಿವಮೊಗ್ಗ: ನಗರದ ವಿವಿಧೆಡೆ ನಾನಾ ಅವತಾರದಲ್ಲಿ ಗಣಪ ಕಂಗೊಳಿಸುತ್ತಿದ್ದಾನೆ. ಗಣಪನ ಭಂಗಿಗಳು ಚಿತ್ತಾಕರ್ಷಕವಾಗಿದೆ. ಕಲಾವಿದರ ಸೃಜನಶೀಲತೆಗೆ ನಿದರ್ಶನ ಎಂಬಂತಿವೆ. ನೇತಾಜಿ ಸರ್ಕಲ್ ಜೆ.ಪಿ ನಗರದ ಸಮುದಾಯ ಭವನದಲ್ಲಿ ಅಂಬೇಡ್ಕರ್ ಯುವಕರ ಸಂಘದಿಂದ ಪ್ರತಿಷ್ಠಾಪಿಸಿರುವ ಹನುಮ, ವಿನಾಯಕನ ಸಮ್ಮಿಲನದ ಸನ್ನಿವೇಶ ಮನೋಜ್ಞವಾಗಿದೆ.

ಅದ್ವೈತ ಗೆಳೆಯರ ಬಳಗದವರು ಹಿಮಾಲಯದ ಚಿತ್ರಣದ ಹೊಂದಿರುವ ವೇದಿಕೆಯಲ್ಲಿ ಗಣೇಶನನ್ನು ಕೂರಿಸಿದ್ದಾರೆ. ಅಶೋಕ ನಗರ ಮುಖ್ಯ ರಸ್ತೆಯಲ್ಲಿ ಚಾಲೆಂಜಿಂಗ್ ಬಾಯ್ಸ ತಂಡದವರು ವಿಶೇಷ ಅಲಂಕಾರದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಅಶೋಕ ನಗರ ಆಟೋಸ್ಟ್ಯಾಂಡ್ ವಿನಾಯಕ ಗೆಳೆಯರ ಬಳಗದವರು ಚಂದ್ರಲೋಕದ ಅಲಂಕಾರದ ನಡುವೆ ಮೂರ್ತಿ ಇರಿಸಿದ್ದಾರೆ.
ಹೊಸಮನೆ ಹಿಂದು ವಿರಾಟ್ ಸೇವಾ ಸಮಿತಿಯು ಕೂರ್ಮಾವತಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಶರಾವತಿ ನಗರದ ಜೈ ಶ್ರೀರಾಮ್ ಗೆಳೆಯರ ಬಳಗದವರು ಗುಹೆಯ ಸನ್ನಿವೇಶ ಸೃಷ್ಟಿಸಿ ಅದರೊಳಗೆ ಗೌರಿ ಹಾಗೂ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ವಿನೋಬ ನಗರದ ಐರಾವತ ಗೆಳೆಯರ ಬಳಗದವರು ಪುಷ್ಕರಿಣಿ, ಕಾಮಧೇನು ಜತೆಗೆ ವಿನಾಯಕ ಹಾಗೂ ವಾಹನವಾದ ಮೂಷಿಕನನ್ನು ಇರಿಸಿದ್ದಾರೆ. ವಿನೋಬ ನಗರದ ಸ್ನೇಹಜೀವಿ ಗೆಳೆಯರ ಬಳಗದವರು ಕಾಡಿನಲ್ಲಿ ಉಯ್ಯಲೆ ಮೇಲೆ ವಿರಮಿಸುತ್ತಿರುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ವಿನೋಬನಗರ ಮುಖ್ಯ ರಸ್ತೆಯಲ್ಲಿ ಬಾಲಗಂಗಾಧರ ತಿಲಕ್ ಯುವಪಡೆಯವರು ಗಜಾನನ ಕಿರೀಟಕ್ಕೆ ನಾಗರಹಾವಿನ ಕಲಾಕೃತಿ ಇರಿಸಿರುವುದು ಸುಂದರವಾಗಿ ಕಾಣುತ್ತಿದೆ. ತಿಲಕ್ ನಗರದ ತಿಲಕ್‌ವಾಡಿ ಬಾಯ್ಸ ಅಯ್ಯಪ್ಪ ಸ್ವಾಮಿಯ ಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಬೇಡರ ಕೇರಿ ಎಲ್ಲಮ್ಮ ದೇವಸ್ಥಾನದಲ್ಲಿ ಸ್ನೇಹಜ್ಯೋತಿ ಯುವಕರ ಸಂಘದಿಂದ ಪರ್ವತದ ತುದಿಯಲ್ಲಿ ಕುಳಿದ ಗಣಪ ಆತನ ಹಿಂದೆ ಹನುಮ ಗಮನಸೆಳೆಯುತ್ತಿದ್ದಾನೆ. ಈ ಬಾರಿಯ ಓಂ ಗಣಪತಿ ಕೈಲಾಸದಲ್ಲಿ ವಿರಾಜಮಾನನಾಗಿದ್ದಾನೆ. ಸಿಎಲ್‌ಆರ್ ರಸ್ತೆಯ ಪ್ರತಾಪ್ ಯುವಕರ ಸಂಘದವರು ಶ್ರೀಧರ ಸ್ವಾಮಿಗಳ ಆಶ್ರಮದ ಚಿತ್ರಣ ಮೂಡಿಸಿ ಅಲ್ಲಿ ಗಣಪತಿಯೊಂದಿಗೆ ಶ್ರೀಧರ ಸ್ವಾಮೀಜಿಯವರನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.
ಸಮರ ವೀರ ಯುವಕರ ಸಂಘದವರು ಸನಾತನ ಗಣೇಶನನ್ನು ಕೂರಿಸಿದ್ದಾರೆ. ಹಿಂದು ಸಂಘಟನಾ ಮಹಾಮಂಡಳಿಯಿಂದ ಪ್ರತಿ ವರ್ಷದಂತೆ ಕೋಟೆ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net