

ಬೆಟ್ಟದಪುರ: ಬೇಡಿ ಬಂದವರಿಗೆ ವರ ಕರುಣಿಸುವ ಮೂಲಕ ಆಂಜನೇಯ ಸ್ವಾಮಿ ಮಹಾಶಕ್ತಿಯಾಗಿ ನೆಲೆ ನಿಂತಿದ್ದಾನೆ. ಸಮೀಪದ ಸೂಳೇಕೋಟೆಯ (ಹನುಮಂತಪುರ) ಗ್ರಾಮದ ಕಾವೇರಿ ನದಿ ತೀರದಲ್ಲಿ ನೆಲೆಸಿರುವ ರಾಮ ಭಕ್ತನಿಗೆ ಪ್ರತಿ ದಿನವೂ ವಿಶೇಷ ಪೂಜೆ ನೆರವೇರುತ್ತದೆ.
ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ಗೌರಿ-ಗಣೇಶ ಚತುರ್ಥಿ, ದೀಪಾವಳಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪೂಜೆಯೊಂದಿಗೆ ಅಭಿಷೇಕಗಳೂ ನೆರವೇರುವೆ. ಆಂಜನೇಯ ಸ್ವಾಮಿಯ ಮಹಾಶಕ್ತಿ ಅರಿತಿರುವವರು ದೂರದ ಊರುಗಳಿಂದ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಮಡಿಕೇರಿ, ಹಾಸನ, ಬೆಂಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ನಾನಾ ಜಿಲ್ಲೆಗಳಿಂದ ಭಕ್ತರೂ ಇಲ್ಲಿಗೆ ಆಗಮಿಸುತ್ತಾರೆ.
ಉತ್ಸವ, ರಥೋತ್ಸವ ಪೂಜೆ: ಯುಗಾದಿ ಹಬ್ಬದ ಬಳಿಕ ದೇವಾಲಯದಲ್ಲಿ ಆಂಜನೇಯಸ್ವಾಮಿ ರಥೋತ್ಸವ ನಡೆಯಲಿದೆ. ಅಂದು ಆಂಜನೇಯಸ್ವಾಮಿ, ರಾಮ, ಸೀತೆ ಮತ್ತು ಲಕ್ಷ್ಮಣ ಉತ್ಸವ ಮೂರ್ತಿಗಳನ್ನು ಒಳಗೊಂಡಂತೆ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಹರಕೆ ಹೊತ್ತವರು ಇಲ್ಲಿನ ಕಾವೇರಿ ತೀರದಲ್ಲಿ ಮುಡಿ ನೀಡಿ ಹರಕೆ ಅರ್ಪಿಸುತ್ತಾರೆ. ಗುಡಿಗೆ ಬರುವ ಭಕ್ತರು ಉದ್ಯೋಗ, ಮನೆಯಲ್ಲಿ ಕಷ್ಟ, ಸಂತಾನಭಾಗ್ಯ, ನೆಮ್ಮದಿ ಇಲ್ಲದಿರುವುದು...ಹೀಗೆ ನಾನಾ ಸಮಸ್ಯೆಗಳನ್ನು ಹೊತ್ತು ತಂದು ಸ್ವಾಮಿ ಮುಂದೆ ಇಟ್ಟು, ನಿವಾರಣೆಗಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಅಂದುಕೊಂಡಂತೆ ನೆರವೇರಿದರೆ ಹರಕೆ ತೀರಿಸುವುದು ಇಲ್ಲಿನ ವಾಡಿಕೆ.
ದೇವಸ್ಥಾನ ಹಿನ್ನೆಲೆ: ಪ್ರಾಚೀನ ಕಾಲದಲ್ಲಿ ಉತ್ತರ ದೇಶ ಎಂದು ಕರೆಯುತ್ತಿದ್ದ ಸ್ಥಳ ಪುಂಡರ ದಾಳಿಗೆ ಸಿಕ್ಕಿ ತತ್ತರಿಸಿ ಹೋಗಿತ್ತು. ಈ ವೇಳೆ ಊರಿನ ಜನರು ದಾಳಿಯಿಂದ ಪಾರಾಗಲು ವಸ್ತುಗಳು ಮತ್ತು ಗ್ರಾಮದ ಆಂಜನೇಯಸ್ವಾಮಿ ಮೂರ್ತಿಯೊಂದಿಗೆ ವಲಸೆ ಹೊರಟಿದ್ದರು. ವಲಸೆ ಹೋಗುತ್ತಿದ್ದ ಸಂದರ್ಭ ಪಿರಿಯಾಪಟ್ಟಣ ತಾಲೂಕಿನ ಒಂದು ಸ್ಥಳದಲ್ಲಿ ಹಾದು ಹೋಗಬೇಕಾದರೆ ಆಂಜನೇಯಸ್ವಾಮಿ ವಿಗ್ರಹ ಉರುಳಿ ಬಿದ್ದಿತ್ತು. ಅದನ್ನು ಮತ್ತೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರಾದರೂ ಅದು ವಿಫಲವಾದಾಗ ಅಲ್ಲೇ ಬಿಟ್ಟು ಹೋಗುತ್ತಾರೆ. ಪರಿಣಾಮ ಮೂರ್ತಿಯು ಸಾಕಷ್ಟು ವರ್ಷಗಳ ಕಾಲ ಹಾಗೇ ಉಳಿದಿತ್ತು ಎನ್ನಲಾಗಿದೆ.
ಸೂಳೆಕೋಟೆ ಸಮೀಪದಲ್ಲಿ ಚಾಮರಾಯನಕೋಟೆ ಎಂಬ ಗ್ರಾಮವಿದ್ದು, ಸಾಕಷ್ಟು ವರ್ಷಗಳ ಹಿಂದೆ ಚಾಮರಾಜ ಎಂಬ ರಾಜನ ಆಳ್ವಿಕೆಯಲ್ಲಿತ್ತು. ಈತನ ಆಸ್ಥಾನದಲ್ಲಿ ಹೊನ್ನಮ್ಮವೆಂಬ ದೇವದಾಸಿ ನರ್ತಕಿಯಾಗಿದ್ದಳು, ಸಂಗೀತ ಹಾಡುತ್ತಿದ್ದಳು. ಈಕೆ ಸಮೀಪದ ರಾಮನಾಥಪುರದ ರಾಮೇಶ್ವರ ಕ್ಷೇತ್ರದಿಂದ ಒಂದು ಲಿಂಗವನ್ನು ತಂದು ಆರಾಧಿಸಿದ ಹಿನ್ನೆಲೆಯಲ್ಲಿ ಈಕೆಗೆ ಯೋಗೀಶ್ವರ ಕಾಣಿಸಿಕೊಂಡು ಕಾವೇರಿ ನದಿಯ ಬಂಡೆಯ ಮಧ್ಯಭಾಗದಲ್ಲಿ ಮೂಡಿದ ಮಾರುತಿಯನ್ನು ಆರಾಧಿಸಿದರೆ ನಿನಗೆ ಸಂತಾನ ಭಾಗ್ಯ ಲಭಿಸುತ್ತದೆ ಎಂದು ಅದೃಶ್ಯನಾಗುತ್ತಾನೆ. ಹೊಳೆ ಹನುಮಂತರಾಯನನ್ನು ಆರಾಧಿಸುವ ವೇಳೆ ಯೋಗೀಶ್ವರ ಕಾಣಿಸಿಕೊಂಡು ಭಕ್ತಿಗೆ ಮೆಚ್ಚಿ ನೀಡಿದ ಹಣ್ಣನ್ನು ಸೇವಿಸಿದಾಗ ಆಕೆ ಗರ್ಭವತಿಯಾಗುತ್ತಾಳೆ. ಅವಳ ಭಕ್ತಿಗೆ ಜನಿಸಿದ ಮಗುವೇ ದೊಡ್ಡ ಪಾಳೇಗಾರ ಸಂಜೀವ ನಾಯ್ಕ.
ಸ್ವಲ್ಪ ದಿನದ ಬಳಿಕ ಚಾಮರಾಜನು ಕೋಟೆಯನ್ನು ಬಿಟ್ಟು ಹೋದಮೇಲೆ ಸಂಜೀವನಾಯ್ಕನೇ ಪಾಳ್ಯಪಟ್ಟವನ್ನು ಸ್ಥಾಪಿಸಿಕೊಂಡೆನ್ನಲಾಗಿದೆ. ತಾಯಿ ಈತನಿಗೆ ಮದುವೆ ಮಾಡುತ್ತಾಳೆ. ಈ ನಡುವೆ ಸಂಜೀವನಾಯ್ಕನಿಗೆ ಪತ್ನಿಯೊಂದಿಗೆ ಮನಸ್ತಾಪ ಹೆಚ್ಚಾಗಿ ಪೂಜೆ ಕಾರ್ಯದಲ್ಲಿ ಇಬ್ಬರಿಗೂ ಜಗಳ ನಡೆದು, ಆಕೆಯ ಏಕವಚನದ ಮಾತಿನಿಂದ ಕುಪಿತಗೊಂಡ ಸಂಜೀವ ನಾಯ್ಕ ಪತ್ನಿಯ ಶಿರವನ್ನು ಕತ್ತರಿಸಿದ. ಇದನ್ನು ಕಂಡು ಉಪಪತ್ನಿಯರು ಅಗ್ನಿ ಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರಿಂದ ಮನನೊಂದ ನಾಯ್ಕನಿಗೆ ಸ್ವಪ್ನದಲ್ಲಿ ಯೋಗೀಶ್ವರರು ಕಾಣಿಸಿಕೊಂಡು ಆಂಜನೇಯ ಮೂರ್ತಿ ವಿಗ್ರಹವನ್ನು ತನ್ನ ಪತ್ನಿಯರು ಅಗ್ನಿಪ್ರವೇಶ ಮಾಡಿದ ಸ್ಥಳದಲ್ಲಿ ಪ್ರತಿಷ್ಠಾಪಿಸುವಂತೆ ತಿಳಿಸುತ್ತಾರೆ. ಅದರಂತೆ ಸಂಜೀವ ನಾಯ್ಕ ಗುಡಿ ಸ್ಥಾಪಿಸಿರುವುದಾಗಿ ಸ್ಥಳದ ಮಹತ್ವ ಕುರಿತು ಪುಸ್ತಕ ಒಂದರಲ್ಲಿ ಉಲ್ಲೇಖವಿದೆ.
ಅಂಜನಾದ್ರಿ ಬೆಟ್ಟ ಮಾದರಿ ನಿರ್ಮಾಣ: ಅಂಜನಾದ್ರಿ ಬೆಟ್ಟದ ಮಾದರಿಯಲ್ಲೇ ಬೆಟ್ಟದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಬೆಟ್ಟಕ್ಕೆ ಅಂಜನಾದ್ರಿ ಬೆಟ್ಟ ಎಂದೇ ನಾಮಕರಣ ಮಾಡಲಾಗಿದೆ. ಬೆಟ್ಟದ ಮೇಲೆ ಸುಮಾರು 54 ಅಡಿಯ ಎತ್ತರದ ಆಂಜನೇಯ ಸ್ವಾಮಿಯ ವಿಗ್ರಹ ಸ್ಥಾಪಿಸಲು ಸಿದ್ಧತೆ ನಡೆಯುತ್ತಿವೆ. ಇದಕ್ಕಾಗಿ ಸರ್ಕಾರವು ಬೆಟ್ಟದ ಮೇಲೆ ಮೂರು ಎಕರೆ ಹತ್ತು ಗುಂಟೆ ಜಾಗವನ್ನು ಮಂಜೂರು ಮಾಡಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ತಲುಪುವ ಮಾರ್ಗ: ಪಿರಿಯಾಪಟ್ಟಣ ತಾಲೂಕು ಕೇಂದ್ರದಿಂದ ಸೂಳೇಕೋಟೆ ಗ್ರಾಮ 32 ಕಿ.ಮೀ ದೂರವಿದಲ್ಲಿದೆ. ಬೆಟ್ಟದಪುರ ಅಥವಾ ಕೊಪ್ಪ ಮಾರ್ಗವಾಗಿ ದೇವಸ್ಥಾನ ತಲುಪಬಹುದು. ಸರ್ಕಾರಿ ಬಸ್‌ಗಳು, ಖಾಸಗಿ ವಾಹನಗಳ ಓಡಾಟದ ಸಂಖ್ಯೆ ಕಡಿಮೆ. ಮಾಹಿತಿಗೆ ದೇವಸ್ಥಾನದ ಕಚೇರಿ ಸಹಾಯಕ ಕೇಶವನಾಯಕ ಮೊ.9535424409 ಸಂಪರ್ಕಿಸಬಹುದು.
ಆಂಜನೇಯಸ್ವಾಮಿ ದರ್ಶನ ಪಡೆಯಲು ದೂರದ ಊರುಗಳಿಂದ ನಿತ್ಯ ಭಕ್ತರು ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ಆಂಜನಾದ್ರಿ ಬೆಟ್ಟದ ರೀತಿಯಲ್ಲಿ ಅಭಿವೃದ್ಧಿ ಮಾಡಲು ಸಿದ್ಧತೆ ನಡೆಯುತ್ತಿದೆ. ಬೆಟ್ಟದ ಮೇಲೆ 54 ಅಡಿ ಎತ್ತರದ ಮಾರುತಿ ವಿಗ್ರಹ ಸ್ಥಾಪನೆ ಮಾಡಲಾಗುವುದು. ದೇವರ ಕೆಲಸಕ್ಕೆ ಭಕ್ತರ ಸಹಕಾರ ಅತ್ಯಗತ್ಯ.
ಶಿಂಗ್ರಿಶೆಟ್ಟಿ ಅಧ್ಯಕ್ಷ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಜೀಣೋದ್ಧಾರ ಸಮಿತಿ
ಸೂಳೇಕೋಟೆಯ ಶ್ರೀಮಾರುತಿ ಕ್ಷೇತ್ರ ಪುಣ್ಯ ಸ್ಥಳ. ಆಂಜನೇಯಸ್ವಾಮಿ ದಯೆಯಿಂದ ನಾನು ಸ್ವಂತ ಹೂಡಿಕೆಯಿಂದ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು, ಸ್ವಾಮಿಯ ಅನುಗ್ರಹದಿಂದ ಅಚ್ಚುಕಟ್ಟಾಗಿ ವಹಿವಾಟು ನಡೆಯುತ್ತಿದೆ. ಈ ದೈವವನ್ನು ನಂಬಿದ ಕ್ಷಣದಿಂದ ಜೀವನದಲ್ಲಿ ವಿಶೇಷ ಬದಲಾವಣೆಯಾಗಿದೆ.
ಮುಕುಂದಚಾರಿ ಭಕ್ತ, ಚಪ್ಪರದಹಳ್ಳಿ