

ವಿಜಯಪುರ: ದೇಶದೆಲ್ಲೆಡೆ ಕರೊನಾ ವ್ಯಾಪಕವಾಗುತ್ತಿದ್ದು, ಅದನ್ನು ನಿಯಂತ್ರಿಸಲಾಗದ ಬಿಜೆಪಿ ಸರ್ಕಾರ ಸೋಂಕಿನ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದೆ ಎಂದು ಮಾಜಿ ಕೃಷಿ ಸಚಿವ ಕೃಷ್ಣಭೈರೇಗೌಡ ಆರೋಪಿಸಿದರು.
ನಗರದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಸೋಮವಾರ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ‘ಆರೋಗ್ಯ ಹಸ್ತ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂಗ್ರೆಸ್ ಜನರ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಹಸ್ತ ಕಾರ್ಯಕ್ರಮ ಜಾರಿಗೊಳಿಸಿದ್ದು, ಪ್ರತಿ ಬೂತ್ ಹಾಗೂ ವಾರ್ಡ್‌ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕರೊನಾ ಸೇನಾನಿಗಳಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.
ಸೆಪ್ಟಂಬರ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವುದು ಖಚಿತವಾಗುತ್ತಿದ್ದು, ಈಗಾಗಲೇ ತಾಲೂಕಿನ 18 ಗ್ರಾಪಂಗಳಲ್ಲಿ ಕಾಂಗ್ರೆಸ್ ಆಡಳಿತ ಹೆಚ್ಚಿದ್ದು, ಮುಂದಿನ ಬಾರಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎ.ರವಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದಕ್ಕೆ ಕರೊನಾ ಹೋಗುವುದಿಲ್ಲ. ಸೋಂಕು ತಡೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಲವಾಗಿದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಎ.ಸಿ.ಶ್ರೀನಿವಾಸ್, ಜಿಲ್ಲಾ ಎಸ್‌ಸಿ ಘಟಕ ಮಾಜಿ ಅಧ್ಯಕ್ಷ ಚಿನ್ನಪ್ಪ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿ.ಮಂಜುನಾಥ್, ಪ್ರಚಾರ ಸಮಿತಿ ಅಧ್ಯಕ್ಷ ಚೇತನ್ ಗೌಡ, ಪುರಸಭೆ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮುಬಾರಕ್, ಕೆಪಿಸಿಸಿ ಸದಸ್ಯ ಚೀಮಾಚನಹಳ್ಳಿ ರಾಮಚಂದ್ರಪ್ಪ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯುವಕಾಂಗ್ರೆಸ್ ಅಧ್ಯಕ್ಷ ಮಾರುತಿ, ತಾಪಂ ಅಧ್ಯಕ್ಷೆ ಶಶಿಕಲಾ ಆನಂದ್, ಎಪಿಎಂಸಿ ಉಪಾಧ್ಯಕ್ಷ ಸುಧಾಕರ್ ಇತರರಿದ್ದರು.
ಕಾರ್ಯಕರ್ತರಿಗೆ ತರಬೇತಿ: ವೈದ್ಯರುಗಳಾದ ಡಾ.ಅಮರಿನ್ ತಾಜ್ ಹಾಗೂ ಡಾ.ಶಾಹುಲ್ ಅಮೀದ್ ಅವರು ಕರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸುವ ಕಾಂಗ್ರೆಸ್ ಕಾರ್ಯಕರ್ತರು ಯಾವ ರೀತಿ ಗೌನ್, ಮಾಸ್ಕ್ ಹಾಗೂ ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸುಗಳನ್ನು ತೊಟ್ಟುಕೊಳ್ಳಬೇಕು ಹಾಗೂ ವಿಸರ್ಜಿಸಬೇಕು ಮತ್ತು ಥರ್ಮಾಮೀಟರ್ ಮತ್ತು ಆಕ್ಸಿಮೀಟರ್‌ಗಳಲ್ಲಿ ಎಷ್ಟು ಡಿಗ್ರಿ ಉಷ್ಣಾಂಶ ಹಾಗೂ ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ ಅಳೆಯುವ ಬಗ್ಗೆ ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.