ಮಂಗಳೂರಿನಲ್ಲಿ ಉಗ್ರ ಪರ ಗೋಡೆ ಬರಹ ಕೇಸ್, ಲುಕ್‌ಔಟ್ ನೋಟಿಸ್ ಜಾರಿಗೆ ನಿರ್ಧಾರ

Mangaluru wall writing
Published on

ಮಂಗಳೂರು: ನಗರದಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ವಿದೇಶದಲ್ಲಿರುವ ವ್ಯಕ್ತಿಯನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಲು ನಿರ್ಧರಿಸಿದ್ದಾರೆ.

ಪ್ರಕರಣದಲ್ಲಿ ಮೊಹಮ್ಮದ್ ಶಾರೀಕ್, ಮಾಝ್ ಮುನೀರ್ ಹಾಗೂ ಸಾದತ್ ಎಂಬವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಪ್ರಮುಖ ಆರೋಪಿ ಶಾರೀಕ್ ನೀಡಿದ ಮಾಹಿತಿಯಂತೆ, ಗೋಡೆ ಬರಹ ಘಟನೆಗೂ ಮುನ್ನ ವಿದೇಶದಲ್ಲಿರುವ ವ್ಯಕ್ತಿಯೊಬ್ಬನ ಜೊತೆ ದೂರವಾಣಿ ಸಂಪರ್ಕವಿತ್ತು. ಆತ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಕೂಲಂಕಷ ತನಿಖೆ ನಡೆಸುವ ಸಲುವಾಗಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪ್ರಕ್ರಿಯೆ ಶೀಘ್ರ ಆರಂಭಗೊಳ್ಳಲಿದೆ. ವಿದೇಶಾಂಗ ಇಲಾಖೆ ಮೂಲಕ ಲುಕ್‌ಔಟ್ ನೋಟಿಸ್ ಜಾರಿಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಡ್ಮಿನ್‌ಗೆ ಪತ್ತೆಗೆ ಯತ್ನ: ಬಂಧಿತ ಆರೋಪಿಗಳಿಬ್ಬರು ಪುಣೆ ಮೂಲದ ವ್ಯಕ್ತಿಯೊಬ್ಬರ ವಾಟ್ಸಾೃಪ್ ಬಳಗದಲ್ಲಿದ್ದು, ಆತನನ್ನು ವಶಕ್ಕೆ ಪಡೆಯಲು ಪೊಲೀಸ್ ತಂಡ ಮಹಾರಾಷ್ಟ್ರಕ್ಕೆ ತೆರಳಿದೆ. ಅಲ್ಲಿನ ಪೊಲೀಸರ ಸಹಕಾರ ಪಡೆದು ಹುಡುಕಾಟ ನಡೆಸುತ್ತಿದೆ. ವಾಟ್ಸಾೃಪ್ ಗುಂಪಿನಲ್ಲಿ ಉಗ್ರ ಪರವಾದ ಬರಹಗಳನ್ನು ಹಾಕಲಾಗುತ್ತಿತ್ತು. ಅಡ್ಮಿನ್ ವಶಕ್ಕೆ ಸಿಕ್ಕಿದರೆ ಆತನಿಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳ ನಂಟು ಇದೆಯೇ ಎಂಬುದು ಸ್ಪಷ್ಟವಾಗಲಿದೆ.

ಉಗ್ರ ಹಣೆಪಟ್ಟಿ: ಬಂಧಿತ ಶಾರೀಕ್‌ನ್ನು ತೀರ್ಥಹಳ್ಳಿಯಲ್ಲಿ ಸ್ಥಳೀಯರು ‘ಟೆರರಿಸ್ಟ್’ ಎಂದು ಕರೆಯುತ್ತಿದ್ದರು ಎಂದು ಬಂಧಿತ ಆರೋಪಿ ಸಾದತ್ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಮಂಗಳೂರಿನಲ್ಲಿ ಉಗ್ರ ಗೋಡೆ ಬರಹದ ಬಳಿಕ ಆರೋಪಿ ಶಾರೀಕ್‌ಗೆ ತಲೆಮರೆಸಿಕೊಳ್ಳಲು ಸಾದತ್ ನೆರವಾಗಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net