

ಸಿಂಧನೂರು: ನಗರದ ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಯೇಸುಕ್ರಿಸ್ತ ಶಿಲುಬೆಗೇರಿದ ದಿನದ ಅಂಗವಾಗಿ ಶುಭ ಶುಕ್ರವಾರವನ್ನು ಕ್ರೈಸ್ತರು ಸಂಭ್ರಮದಿಂದ ಆಚರಿಸಿದರು.
ಚರ್ಚ್‌ನಲ್ಲಿ ಕ್ರೈಸ್ತರು ಯೇಸುವಿನ ಗುಣಗಾನ ಮಾಡಿ, ಧ್ಯಾನ-ಪ್ರಾರ್ಥನೆ ಮಾಡಿದರು. ನಂತರ ಚರ್ಚ್ ಆವರಣದಲ್ಲಿ ಯೇಸುವನ್ನು ಶಿಲುಬೆಗೆ ಏರಿಸುವ ರೂಪಕ ನಡೆಯಿತು. ಫಾದರ್ ಜೇವಿಯರ್ ಪ್ರಬೋಧನೆ ನೀಡಿದರು.
ಕ್ಯಾಥೋಲಿಕ್ ಧರ್ಮಸಭೆಯ ಭಕ್ತಾಧಿಗಳು ಸಾಮುಖ್ಯವಾಗಿ ಪಲಿಪೂಜೆಯ ವಿಧಿಗಳಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಅನುಭವ ಪಡೆದರು. ಧರ್ಮಗುರು ಫಾದರ್ ಜ್ಞಾನಪ್ರಕಾಶ್ ಮಾತನಾಡಿ, ಪ್ರಭು ಯೇಸುವಿನ ಪೂಜ್ಯ ಯಾತನೆಯ ಹಾಗೂ ಮರಣದ ಸ್ಮರಣೆಯ ದಿನ ಇದಾಗಿದೆ.
ಧರ್ಮಸಭೆ ನಮ್ಮೆಲ್ಲರಿಗೂ ಪ್ರೀತಿ, ಕ್ಷಮೆ, ತ್ಯಾಗ ಎಂಬ ಮೂರು ಪ್ರಮುಖ ವಿಷಯಗಳ ಬಗ್ಗೆ ಚಿಂತಿಸಲು ಕರೆ ನೀಡುತ್ತದೆ. ದೇವರು ನಮ್ಮನ್ನು ಎಷ್ಟಾಗಿ ಪ್ರೀತಿಸಿದನೆಂದರೆ, ಒಬ್ಬನೇ ಮಗನನ್ನು ನಮ್ಮ ಉದ್ಧಾರಕ್ಕಾಗಿ ಧರೆಗೆ ಕಳುಹಿಸಿದರು. ಹಾಗಾಗಿ ನಾವು ನಮ್ಮ ನೆರೆ-ಹೊರೆಯವರನ್ನು ಪ್ರೀತಿಯಿಂದ ಸಹೋದರರಂತೆ ಕಾಣಬೇಕು ಎಂದು ಸಂದೇಶ ನೀಡಿದರು.