

ಹುಬ್ಬಳ್ಳಿ: ಪೊಲೀಸ್ ಆಯುಕ್ತ: ಎಡಗೈ ಮೇಲಿರೋದು ಏನೋ?.
ಮಾದಕ ವ್ಯಸನಿ: ಸಿಂಹ ಚಿತ್ರದ ಟ್ಯಾಟೂ ಸರ್.
ಪೊಲೀಸ್ ಆಯುಕ್ತ: ನಾಯಿ ಕಂಡಂತಿದೆಯಲ್ಲ ! ಲವರ್ ಹೆಸ್ರಾ? ಆಟೋ ಚಾಲಕ ಅಂತಿಯಾ, ಆಟೋರಿಕ್ಷಾ ಚಾಲಕರಿಗೆ ಅವಮಾನ ಮಾಡುತ್ತಿದ್ದೀಯಲ್ಲ. ಮಾದಕ ವಸ್ತುಗಳ ಸೇವನೆ ಬಿಟ್ಟು ಬಿಡು. ಇಲ್ಲವಾದರೆ ಮತ್ತೆ ಗಡಿಪಾರು ಆಗುತ್ತಿಯ ಹುಷಾರ್.
ಇಲ್ಲಿಯ ಕಾರವಾರ ರಸ್ತೆಯ ಸಿಎಆರ್ ಮೈದಾನದಲ್ಲಿ ಮಾದಕ ವಸ್ತು ವ್ಯಸನಿಗಳ ಪರೇಡ್‌ನಲ್ಲಿ ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಮಾದಕ ವ್ಯಸನಿ ಅರ್ಜುನ ಎನ್ನುವಾತನಿಗೆ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಪ್ರಶ್ನೆ ಮಾಡಿದ್ದಲ್ಲದೇ ಖಡಕ್ ಎಚ್ಚರಿಕೆಯನ್ನೂ ನೀಡಿದರು.
ಮಠದಲ್ಲಿರುವ ವ್ಯಕ್ತಿ, 62 ವಯಸ್ಸಿನ ಅಜ್ಜ, 19 ವರ್ಷದ ಯುವಕ ಹೀಗೆ ಬಹಳಷ್ಟು ಜನ ಮಾದಕ ವ್ಯಸನಿಗಳಿಗೆ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದರು. ಇವರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿ ಸಂಬಂಧಿಸಿದವರಿಗೆ ವಿವರಿಸಿ ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಒಟ್ಟು 802 ಮಾದಕ ವ್ಯಸನಿಗಳಲ್ಲಿ 620 ಜನರ ಪರೇಡ್ ಮಾಡಲಾಯಿತು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿನ ಮಾದಕ ವ್ಯಸನಿಗಳ ಪರೇಡ್ ಶನಿವಾರದಿಂದ ಆರಂಭವಾಗಿದೆ.
ಗಡಿಪಾರು ಪ್ರಕ್ರಿಯೆ ಜನವರಿಯಿಂದ ಶುರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾದಕ ವ್ಯಸನಿಗಳು ಹಾಗೂ ಪೆಡಲರ್‌ಗಳ ಪರೇಡ್ ಮಾಡಲಾಗಿದೆ. ಈ ವರ್ಷಾಂತ್ಯದಲ್ಲಿ ಗಡಿಪಾರು ಪ್ರಕ್ರಿಯೆ ಶುರು ಮಾಡಬೇಕಿತ್ತು. ಪೊಲೀಸರು ಬಂದೋಬಸ್ತ್‌ಗೆ ತೆರಳಿದ್ದರು. ಜನವರಿಯಿಂದ ಶುರು ಮಾಡಲಾಗುವುದು ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಟ್ಟಿ ತಯಾರಾಗಿದೆ. ರೌಡಿಶೀಟರ್ ತೆರೆಯುವುದು, ಬಿಡುವುದು ನಿರಂತರ ಪ್ರಕ್ರಿಯೆ ಎಂದರು.
ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮತ್ತು ದಾಂಧಲೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೇಶ್ವಾಪುರ, ವಿದ್ಯಾನಗರ, ಹಳೇ ಹುಬ್ಳಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದು ಗಮನಕ್ಕೆ ಬಂದಿದೆ ಎಂದರು.
ಸ್ಪಾಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಸೇರಿ ಚರ್ಚಿಸುತ್ತೇವೆ. ಅವರ ಒಪ್ಪಿಗೆ ಸಿಕ್ಕ ನಂತರ ಜಂಟಿ ಕಾರ್ಯಾಚರಣೆ ಮಾಡಿ ತಹಬದಿಗೆ ತರಲಾಗುವುದು ಎಂದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ ಇತರರು ಇದ್ದರು.