

ಭಟ್ಕಳ: ಆಹಾರ ಅರಸಿ ನವಿಲುಗಳ ತಂಡ ಕಾಡಿನಿಂದ ನಾಡಿಗೆ ದಾಂಗುಡಿಯಿಡುತ್ತಿವೆ. ಬಯಲು ಪ್ರದೇಶದಲ್ಲಿ ಸ್ವಚ್ಛಂದವಾಗಿ ಆಡಿಕೊಳ್ಳುತ್ತಿವೆ. ಗಂಡು ನವಿಲು ಗರಿ ಬಿಚ್ಚಿ ಕುಣಿದರೆ ಹೆಣ್ಣು ಮಯೂರ ಅತ್ತಿತ್ತ ನೋಡುತ್ತ ಆಹಾರದ ಅನ್ವೇಷಣೆ ಮಾಡುತ್ತಿರುತ್ತವೆ.
ತಾಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 10ಕ್ಕೂ ಅಧಿಕ ನವಿಲುಗಳ ಹಿಂಡೊಂದು ಕಾಣಿಸಿಕೊಂಡಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಬಯಲು ಪ್ರದೇಶಕ್ಕೆ ಲಗ್ಗೆ ಇಟ್ಟು ನರ್ತನಗೈಯುತ್ತವೆ. ಅರಣ್ಯದಲ್ಲಿರಬೇಕಾದ ರಾಷ್ಟ್ರಪಕ್ಷಿ ನವಿಲು ನಾಡನ್ನೇ ಮನೆಯನ್ನಾಗಿಸಿಕೊಳ್ಳಲು ಹೊರಟಂತಿದೆ.
ಕೆಲ ದಿನಗಳಿಂದ ಕಡಿಮೆಯಾಗಿರುವ ಮಳೆ ಆಗಾಗ ತುಂತುರಾಗಿ ಸುರಿಯುತ್ತದೆ. ವರುಣನ ಕೃಪೆಯಿಂದ ಸುತ್ತಲೆಲ್ಲ ಹಸಿರು ರಾಶಿ ಕಂಗೊಳಿಸುತ್ತಿದೆ. ಅದರ ಮಧ್ಯೆಯೇ ನವಿಲು ಹಸಿರು ಗರಿ ಬಿಚ್ಚಿ ಕುಣಿಯುತ್ತ, ಆಗೊಮ್ಮೆ ಈಗೊಮ್ಮೆ ರೆಕ್ಕೆ ಬಿಚ್ಚಿ ಹಾರುತ್ತ ಮುದ ನೀಡುತ್ತಿದೆ.
ಗಂಡು ನವಿಲು ಕುಣಿಯುವುದೇಕೆ?
ಹೆಣ್ಣು ನವಿಲಿನೊಂದಿಗೆ ಸೇರಲು ಗಂಡು ಮಯೂರ ಕಾತರಿಸುವ ವೇಳೆ ಆಕಾಶದಲ್ಲಿ ಕಾಣುವ ಕರಿ ಮೋಡ ಅಥವಾ ಮಳೆಯ ಸೂಚನೆ ಸಿಕ್ಕಿದೊಡನೆ ಸಂಭ್ರಮಿಸುತ್ತದೆ. ಗರಿಗಳನ್ನು ಒಂದಕ್ಕೊಂದು ಬಡಿದು ಕೂಗುತ್ತ ತನ್ನ ಸಂಗಾತಿಯನ್ನು ಸೆಳೆದುಕೊಳ್ಳುತ್ತದೆ. ರಾಷ್ಟ್ರಪಕ್ಷಿ ಮಯೂರ ನರ್ತನ ನೋಡುವುದೇ ಚಂದ.
ಕೆಲ ವರ್ಷಗಳಿಂದ ನವಿಲು ಮಾನವ ಸ್ನೇಹಿಯಾಗುತ್ತಿದೆ. ಕೆಲವೊಮ್ಮೆ ಸ್ಥಳೀಯರ ಹೊಲ-ಮನೆಗಳ ಕಾಂಪೌಂಡ್ ದಾಟಿಯೂ ಬರುವ ನವಿಲು ಮನೆಗಳ ಅಂಗಳದಲ್ಲೂ ಹೆಜ್ಜೆ ಗುರುತು ಮೂಡಿಸಿ ಹೋಗುತ್ತದೆ. ಜನರೂ ನವಿಲಿಗೆ ತುಸು ದೂರದಿಂದ ಆಹಾರ ಹಾಕಿ ಆನಂದಿಸುವ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ. ಹೊಲಗಳಲ್ಲಿಯ ಕೀಟಗಳನ್ನು ತಿನ್ನುವ ಮೂಲಕ ಕೃಷಿಕರಿಗೆ ನವಿಲು ಉಪಕಾರಿಯೂ ಆಗಿದೆ. ಕೆಲವೊಮ್ಮೆ ಬಿತ್ತಿದ ಬೀಜಗಳನ್ನು ತಿಂದು ತೊಂದರೆ ಕೊಡುವುದೂ ಇದೆ ಎನ್ನುತ್ತಾರೆ ಸ್ಥಳೀಯರು.