ಹೆಣ್ಣು ಮಗುವನ್ನುಗಂಡಿನ ಸಮಾನ ನೋಡಿ

13-KND-01
Published on

ಕುಂದಗೋಳ: ಹೆಣ್ಣು ಹುಣ್ಣಲ್ಲ, ಸಮಾಜಕ್ಕೆ ಕಣ್ಣು ಇದ್ದಂತೆ. ಹೀಗಾಗಿ ಗಂಡು-ಹೆಣ್ಣು ಎಂಬ ಬೇಧಭಾವ ಮರೆತು ಹೆಣ್ಣು ಮಕ್ಕಳನ್ನು ಸಮಾನವಾಗಿ ನೋಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಪಿ.ಜೆ. ಪರಮೇಶ್ವರ ಹೇಳಿದರು.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿ ಕಾರ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಹೆಣ್ಣು ತಾಯಿ, ಮಡದಿ, ಸಹೋದರಿ ಹಾಗೂ ಮಗಳಾಗಿ ಎಲ್ಲ ಬಂಧನದಲ್ಲಿ ನಮ್ಮ ಜೊತೆಗಿರುತ್ತಾಳೆ. ಆದರೆ, ಹೆಣ್ಣು ಮಕ್ಕಳಿಗೆ ನಾವು ಕೊಡಬೇಕಾದ ಗೌರವ ಸಮಾಜದಲ್ಲಿ ಇನ್ನು ಕೊಡುತ್ತಿಲ್ಲ. ಹೀಗಾಗಿ ಹೆಣ್ಣು ಅನೇಕ ಶೋಷಣೆ ದೌರ್ಜನ್ಯಗಳಿಗೆ ಸಿಲುಕುತ್ತಿದ್ದಾಳೆ. ಇವುಗಳಿಂದ ವಿಮುಕ್ತವಾಗಲು ಸಂವಿಧಾನದಲ್ಲಿ ಅನೇಕ ಕಾಯ್ದೆಗಳು ಮತ್ತು ಹಕ್ಕುಗಳು ಒದಗಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ದಿವಾಣಿ ನ್ಯಾಯಾಧೀಶರಾದ ಗಾಯತ್ರಿ ಮಾತನಾಡಿ, ಗಾಂಧೀಜಿಯವರು ಕಂಡ ಕನಸಿನಂತೆ ಮಹಿಳೆ ಮಧ್ಯರಾತ್ರಿ ರಸ್ತೆಯಲ್ಲಿ ಯಾವುದೇ ತೊಂದರೆ ಇಲ್ಲದೆ ಹೋಗಿ ಬಂದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸುರಕ್ಷತೆಯಿದೆ ಎಂದರ್ಥ. ಆದರೆ, ವಾಸ್ತವವಾಗಿ ಹೆಣ್ಣು ಅನೇಕ ಶೋಷಣೆ, ದೌರ್ಜನ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ. ನಮ್ಮ ಹಕ್ಕು, ರಕ್ಷಣೆ ಕುರಿತು ನಮಗೆ ಸರಿಯಾದ ಮಾಹಿತಿ ಇದ್ದಲ್ಲಿ ಉತ್ತಮ ಜೀವನ ಸಾಗಿಸಬಹುದು. ಇದರಿಂದ ಹೆಣ್ಣುಮಕ್ಕಳು ಅನೇಕ ಅವಕಾಶಗಳು ಹಾಗೂ ಶಿಕ್ಷಣವನ್ನು ಪಡೆದು ಕುಟುಂಬ ಹಾಗೂ ದೇಶಕ್ಕೆ ಏನಾದರೂ ಕೊಡುಗೆ ನೀಡಬಹುದು ಎಂದರು.

ಹೆಣ್ಣು ಮಕ್ಕಳಿಂದ ವೇಷಭೂಷಣ ಪ್ರದರ್ಶನ ನಡೆಯಿತು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಶಾದ ಕಂದಗಲ್, ವಕೀಲರ ಸಂಘದ ಅಧ್ಯಕ್ಷ ಯು.ಎಂ. ಪಾಟೀಲ, ಎಸ್.ಎನ್. ತೊಂಡೂರ, ಚಂದ್ರಕಲಾ ಪ್ರಭಾಕರ, ಗೀತಾ ಜಿ., ಕಲ್ಲಪ್ಪ ಶಿವಳ್ಳಿ , ಅಂಗನವಾಡಿ ಕಾರ್ಯಕರ್ತರು, ಪೆನಲ್ ವಕೀಲರು, ಪದಾಧಿಕಾರಿಗಳು, ವಕೀಲರು ಹಾಗೂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net