ದೀರ್ಘಾವಧಿಗೆ ಹೂಡಿಕೆ ಮಾಡಿದಲ್ಲಿ ಉತ್ತಮ ಫಲಿತಾಂಶ: ಗೌರಂಗ್ ಎಚ್.ಷಾ ಅಭಿಮತ

1
Published on

ಮೈಸೂರು: ಮಾರುಕಟ್ಟೆ ಹಣಕಾಸಿನ ಏರಿಳಿತದಿಂದ ಉಂಟಾಗುವ ನಷ್ಟ ಸರಿದೂಗಿಸಲು ಯಾವಾಗಲೂ ದೀರ್ಘಕಾಲಿನ ವಿಧಾನದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಮುಂಬೈ ಜಿಯೋಜಿತ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಗೌರಂಗ್ ಎಚ್.ಷಾ ಅಭಿಪ್ರಾಯಪಟ್ಟರು.

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗ, ವಿದ್ಯಾವರ್ಧಕ ಸಂಶೋಧನಾ ಪ್ರತಿಷ್ಠಾನ, ಐಕ್ಯೂಎಸಿ, ಕೇರಳದ ಜಿಯೋಜಿತ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಟ್‌ನಿಂದ ಶನಿವಾರ ಸಾಮಾಜಿಕ ವಿಜ್ಞಾನದಲ್ಲಿ ನವೀನ ಸಂಶೋಧನಾ ಅಭ್ಯಾಸ ಕುರಿತ ಒಂದು ದಿನದ ಸಮ್ಮೇಳನದಲ್ಲಿ ಮಾತನಾಡಿದರು.

ಕೆಲವು ವರ್ಷಗಳ ಹಿಂದೆ ಉಳಿತಾಯ ಎಂದರೆ ಆದಾಯದಲ್ಲಿ ಖರ್ಚನ್ನು ಕಳೆದು ಉಳಿದ ಹಣವೇ ಉಳಿತಾಯವಾಗುತ್ತಿತ್ತು. ಆದರೆ, ಇಂದು ಅದು ಅದಲು ಬದಲಾಗಿದ್ದು ಒಟ್ಟು ಆದಾಯದಲ್ಲಿ ಹೂಡಿಕೆ ಮಾಡಿ ಉಳಿದ ಹಣದಲ್ಲಿ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಳ್ಳುವುದೇ ಇಂದಿನ ಉಳಿತಾಯ ಪದ್ಧತಿಯಾಗಿದೆ ಎಂದು ವಿಶ್ಲೇಷಿಸಿದರು.

ಇದು ಕೇವಲ ಹೂಡಿಕೆದಾರರಿಗೆ ಮಾತ್ರವಲ್ಲದೆ ಅವರನ್ನು ಅವಲಂಬಿತರ ಭವಿಷ್ಯವನ್ನೂ ಉತ್ತಮವಾಗಿಸುತ್ತದೆ. ಪ್ರಪಂಚದಲ್ಲಿ ಭಾರತದ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ನಾವಿಂದು ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ ಎಂದರು.

ಹೂಡಿಕೆಯಲ್ಲಿ ದೀರ್ಘಕಾಲಿಕ ಹಾಗೂ ಅಲ್ಪಕಾಲಿಕ ಪದ್ಧತಿ ಇವೆ. ಯಾವಾಗಲೂ ಮಾರುಕಟ್ಟೆಯ ಹಣಕಾಸಿನ ಏರಿಳಿತಗಳನ್ನು ನಿರಂತರ ಅಧ್ಯಯನ ಮಾಡಿ ದೀರ್ಘಕಾಲೀನ ವಿಧಾನಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಫಲಿತಾಂಶವು ಲಭಿಸುತ್ತದೆ ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಹಣಕಾಸು ಮಾರುಕಟ್ಟೆಗಳು ಅನೇಕ ಬದಲಾವಣೆಗಳನ್ನು ಕಂಡಿದ್ದು, ನಿರಂತರವಾಗಿ ಬದಲಾಗುತ್ತಿರುವ ಪ್ರವೃತ್ತಿಗಳನ್ನು ಎದುರಿಸುತ್ತಿವೆ. ಹಣಕಾಸು ಮಾರುಕಟ್ಟೆಗಳು ವ್ಯಕ್ತಿಗಳ ಮತ್ತು ಕಂಪನಿಗಳ ಹಣಕಾಸಿನ ಸ್ವತ್ತುಗಳನ್ನು ವ್ಯಾಪಾರ ಮಾಡುವ ವೇದಿಕೆಗಳಾಗಿವೆ. ಈ ಪ್ರಕ್ರಿಯೆಯ ಪರಿಣಾಮ ಬಂಡವಾಳದ ಹರಿವು ಮತ್ತು ಆರ್ಥಿಕ ಸ್ಥಿರತೆಯನ್ನು ಸುಗಮಗೊಳಿಸುವುದಾಗಿರುತ್ತದೆ. ಇಂದಿನ ಈ ಸಮ್ಮೇಳನದಲ್ಲಿ ನಾವು ಹಣಕಾಸು ಮಾರುಕಟ್ಟೆಗಳ ಸಂಶೋಧನೆಯಲ್ಲಿನ ಪ್ರಮುಖ ಘಟ್ಟಗಳ ಬಗ್ಗೆ ಚರ್ಚಿಸೋಣವೆಂದು ಸಮ್ಮೇಳನದ ಯಶಸ್ಸಿಗೆ ಶುಭ ಹಾರೈಸಿದರು.

ಸಮ್ಮೇಳನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಡಾ.ಎಸ್.ಮರೀಗೌಡ ಅವರು, 2003ರಿಂದಲೂ ನಿರಂತರವಾಗಿ ವಿಚಾರಸಂಕಿರಣ. ಸಮ್ಮೇಳನ, ಕಾರ್ಯಾಗಾರಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಎಂ.ಕಾಂ ವಿಭಾಗವು ಪ್ರಾರಂಭದಿಂದಲೂ ಸಂಶೋಧನೆ ಮತ್ತು ನಾವಿನ್ಯತೆಯಲ್ಲಿ ಸಕ್ರಿಯವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಿದೆ ಎಂದರು.

ಅಂತಾರರಾಷ್ಟ್ರೀಯ ಸಮ್ಮೇಳನವು ಸಮಾಜ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧಕರು, ವಿದ್ವಾಂಸರು ಮತ್ತು ತಜ್ಞರನ್ನು ಒಟ್ಟುಗೂಡಿಸುವ ಒಂದು ಉತ್ತಮ ಶೈಕ್ಷಣಿಕ ವೇದಿಕೆಯಾಗಿದೆ. ಇದು ಅರ್ಥಪೂರ್ಣ ಹಾಗೂ ಆರೋಗ್ಯಕರ ಚರ್ಚೆ ನಡೆಸುವುದರ ಮೂಲಕ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸಂಶೋಧಕರು ಹೊಸ ವಿಷಯಗಳನ್ನು ಕಲಿಯಲು, ಹೊಸ ಆಲೋಚನೆಗಳನ್ನು ಹುಟ್ಟುಹಾಕಲು ಸಹಕಾರಿಯಗಿದೆ. ಸಂಶೋಧನಾ ಫಲಿತಾಂಶಗಳು ಮತ್ತು ವಿಚಾರಗಳನ್ನು ಹಂಚಿಕೊಳ್ಳುವುದರಿಂದ ಹೊಸ ಒಳನೋಟಗಳನ್ನು ಪಡೆಯಲು ಪರಿಪೂರ್ಣ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ.ನಾಗರಾಜು, ಸಮ್ಮೇಳನದ ಕಾರ್ಯದರ್ಶಿ ಡಾ.ಎಸ್.ಪೂರ್ಣಿಮಾ ಇತರರು ಇದ್ದರು. ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಎರಡು ತಾಂತ್ರಿಕ ಅಧಿವೇಶನಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net