ಮದ್ಯದಂಗಡಿಗಳ ಮುಂದೆ ಉದ್ದುದ್ದ ಕ್ಯೂ

26mul3
Published on

ಲಕ್ಷ್ಮೇಶ್ವರ: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಗುರುವಾರದಿಂದ ಗದಗ ಜಿಲ್ಲೆ ಸಂಪೂರ್ಣ ಲಾಕ್ ಆಗಲಿದೆ. ಅದಕ್ಕಾಗಿ ಬುಧವಾರ ಪಟ್ಟಣದಲ್ಲಿ ಮದ್ಯಪ್ರಿಯರು ಅಂಗಡಿಗಳ ಮುಂದೆ ಕ್ಯೂ ನಿಂತಿದ್ದರು.

ನಸುಕಿನ 5 ಗಂಟೆಯಿಂದಲೇ ಮದ್ಯದ ಅಂಗಡಿಗಳ ಮುಂದೆ ಜನರು ಕಾದು ಕುಳಿತಿದ್ದರು. ಧಾರವಾಡ, ಹಾವೇರಿ ಜಿಲ್ಲೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಸಂಪೂರ್ಣ ಲಾಕ್​ಡೌನ್ ಘೊಷಿಸಿದ್ದು, ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ, ಆ ಜಿಲ್ಲೆಗಳ ಗಡಿಭಾಗದ ಗ್ರಾಮಗಳ ಜನರು ಮದ್ಯ ಖರೀದಿಗಾಗಿ ಪಟ್ಟಣಕ್ಕೆ ಆಗಮಿಸಿದ್ದರು.

ಮಕ್ಕಳನ್ನು ಸರದಿಯಲ್ಲಿ ನಿಲ್ಲಿಸಿದರು!: ಐದು ದಿನಗಳ ಕಾಲ ಮದ್ಯ ಮಾರಾಟ ಬಂದ್ ಆಗುವುದರಿಂದ ಕೆಲವರು ಸಿಕ್ಕಷ್ಟು ಮದ್ಯ ಖರೀದಿಗೆ ಮುಂದಾಗಿದ್ದರು. ಎಂಎಸ್​ಐಎಲ್​ನಲ್ಲಿಯೂ ಮದ್ಯದ ಕೊರತೆ ಕಂಡು ಬಂದಿದ್ದರಿಂದ ಮಾರಾಟಗಾರರು ಒಬ್ಬರಿಗೆ ಗರಿಷ್ಠ 2 ಬಾಟಲ್ ಮಾತ್ರ ಕೊಡುತ್ತಿದ್ದರು. ಹೀಗಾಗಿ, ಕೆಲವರು ಮಕ್ಕಳನ್ನು, ಆತ್ಮೀಯರನ್ನು ಸರದಿಯಲ್ಲಿ ನಿಲ್ಲಿಸಿ ಮದ್ಯ ಖರೀದಿಸಿದರು.

ಮಾರಾಟದಲ್ಲಿ ದಾಖಲೆ

ಮುಳಗುಂದ ಪಟ್ಟಣದ ಎಂಎಸ್​ಐಎಲ್ ಮಳಿಗೆ ಮುಂದೆ ಮದ್ಯಪ್ರಿಯರು ಮದ್ಯ ಖರೀದಿಗೆ ಬೆಳಗಿನ ಜಾವ 5 ಗಂಟೆಯಿಂದಲೇ ಜಮಾಯಿಸಿದ್ದರು. 6 ರಿಂದ 10 ಗಂಟೆಯವರೆಗೆ ಮಾರಾಟಗಾರರಿಗೆ ಬಿಡುವೇ ಸಿಗದಂತಾಗಿತ್ತು.

ಪಟ್ಟಣದಲ್ಲಿ ಎಂಎಸ್​ಐಎಲ್ ಮಳಿಗೆ ಅಂಗಡಿ ಪ್ರಾರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಯಿತು. 4 ಗಂಟೆಯಲ್ಲಿ ಅಂದಾಜು 5.30 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಗ್ರಾಹಕರು ಖರೀದಿಸಿದರು. ಧಾರವಾಡ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆಯೇ ಮದ್ಯದಂಗಡಿಗಳು ಬಂದ್ ಆಗಿದ್ದರಿಂದ ಮದ್ಯಪ್ರಿಯರು ಹುಬ್ಬಳ್ಳಿ- ಧಾರವಾಡ ಹಾಗೂ ಸುತ್ತಮುತ್ತಲಿನ ಊರುಗಳಿಂದ ಬಂದು ಮದ್ಯ ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net