

ಮುರಗೋಡ: ಸ್ಥಳೀಯ ಕಸಬಾ ಗಲ್ಲಿಯ ವೀರಭದ್ರೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆ, ಭಜನಾ ಮಂದಿರ ಉದ್ಘಾಟನೆ ಅಂಗವಾಗಿ ಮೂರನೇ ಬಾರಿಗೆ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಭಜನಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಬಸಳಿಗೊಂದಿ ಗ್ರಾಮದ ಶ್ರೀ ಸಿದ್ಧಾರೂಢ ಭಜನಾ ಮಂಡಳ ಪ್ರಥಮ ಸ್ಥಾನ ಪಡೆದು 25 ಸಾವಿರ ರೂ. ನಗದು ಬಹುಮಾನ ಟ್ರೋಫಿ ಗೆದ್ದು ವಿಜಯ ಪತಾಕೆ ಹಾರಿಸಿತು.
ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಗುರುಮಹಾಂತೇಶ ಹಿರೇಮಠ, ಸತತ ಪರಿಶ್ರಮದಿಂದ ಮುನ್ನಡೆದರೆ ಯಶಸ್ಸು ಸಿಗುತ್ತದೆ. ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾಗಿ ಜೀವನ ನಡೆಸಬೇಕು ಎಂದರು.
ಭಜನಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಕುಳಲಿಯ ಭೀಮಾವಧೂತ ಭಜನಾ ಮಂಡಳ 20 ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ಸಿದ್ಧಾರೂಢ ಹಳ್ಳೂರ, ಪಾಂಡುರಂಗ ಚಿಕ್ಕೊಪ್ಪ ಹಾಗೂ ಬಸವೇಶ್ವರ ದೇಗಾಂವ ಮೂರನೇ ಸ್ಥಾನ ಪಡೆದು ಬಹುಮಾನ ಹಂಚಿಕೊಂಡರು. ಒಟ್ಟು 9 ಬಹುಮಾನಗಳಿಗೆ ನಗದು ಟ್ರೋಫಿ ವಿತರಿಸಲಾಯಿತು. 38 ತಂಡಗಳು ಭಾಗವಹಿಸಿದ್ದವು. ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಸ್ಥಳೀಯ ಕಲಾವಿದರಾದ ಸಂಜು ಬಸಯ್ಯ, ಪಲ್ಲವಿ ದಂಪತಿಯನ್ನು ಸನ್ಮಾನಿಸಲಾಯಿತು. ವಿ.ಬಿ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಿದ್ದನಗೌಡರ ಮಾತನಾಡಿದರು. ವೀರೂಪಾಕ್ಷಗೌಡ ಪಾಟೀಲ, ದುಂಡಪ್ಪ ಕಾರಿ, ಬಾಬು ಮೆಗೇರಿ, ಪರಮಾನಂದ ತಟ್ಟಿಮನಿ, ಶಿವಲಿಂಗಯ್ಯ ಹಿರೇಮಠ, ಮಹಾಂತೇಶ ಕಾರಿ, ರಮೇಶ ಪಾಟೀಲ, ಸಹದೇವಗೌಡ ಪಾಟೀಲ, ಯಶವಂತಗೌಡ ಪಾಟೀಲ, ಸೋಮನಗೌಡ ಪಾಟೀಲ, ಬಸವರಾಜ ಬ್ಯಾಳಿ, ಮಹಾಂತೇಶ ಬೆಟ್ಟದ ಇತರರಿದ್ದರು.