

ಮೈಸೂರು: ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ಸಂಬಂಧ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಎಂ.ಚೌಡಯ್ಯ ಸಾಮಾಜಿಕ, ಶೈಕ್ಷಣಿಕ ಚಾರಿಟಬಲ್ ಇಂಟರ್ ನ್ಯಾಷಿನಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷೆ ಸರ್ವಮಂಗಳ ಮಂಗಳವಾರ ನಗರದ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ವರುಣ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಕಳೆದ ವರ್ಷವೇ ವರುಣ ಠಾಣಾಗೆ ದೂರು ನೀಡಿದ್ದೆ. ಆದರೆ, ಯಾವುದೇ ಕ್ರಮವನ್ನು ಪೊಲೀಸರು ಕೈಗೊಂಡಿಲ್ಲ. ಈ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಬೆಂಗಳೂರಿನಲ್ಲಿಯೂ ಸುದ್ದಿಗೋಷ್ಠಿ ಮಾಡಿದ್ದೇನೆ. ಆದರೂ, ಕ್ರಮ ಜರುಗಿಸಿಲ್ಲ. ಯುವಕ-ಯುವತಿಯ ಖಾಸಗಿ ವಿಡಿಯೋಗಳನ್ನು ಕೆಲವು ಪೊಲೀಸರು ಸಿಡಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಕೂಡಲೇ ತನಿಖೆ ಕೈಗೊಂಡು ವೇಶ್ಯಾವಾಟಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.