

ಮಹೇಶ್ ವಿಜಾಪುರ ಬೆಳಗಾವಿ: ವಿಧಾನಸಭಾ ಚುನಾವಣೆ ನಂತರ ತಣ್ಣಗಾಗಿದ್ದ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರುತ್ತಿದ್ದು, ಲೋಕಸಭಾ ಸಾರ್ವತ್ರಿಕ ಚುನಾವಣೆ ಸ್ಪರ್ಧೆಗೆ ಅಭ್ಯರ್ಥಿ ಘೋಷಣೆಗೂ ಮುಂಚೆಯೇ ಕಣದಲ್ಲಿ ಹೆಸರು ಹರಿಬಿಡುವ ತಂತ್ರಗಾರಿಕೆ ಜೋರು ಪಡೆದುಕೊಳ್ಳುತ್ತಿದೆ.
ಎರಡೂವರೆ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಸ್ಪರ್ಧೆಯ ವಿಷಯವಾಗಿ ಅಧಿಕೃತ ಚರ್ಚೆಗಿಂತ ಅನಧಿಕೃತ ವಿಷಯಗಳು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿವೆ. ಆಕಾಂಕ್ಷಿ ಅಭ್ಯರ್ಥಿ ಪರ ಬೆಂಬಲಿಗರ ಊಹಾಪೋಹಗಳು ಸಾಮಾಜಿಕ ಜಾಲತಾಣ ಆವರಿಸಿಕೊಳ್ಳುತ್ತಿದ್ದರೆ, ಆಗಾಗ ಆಕಾಂಕ್ಷಿಗಳೂ ಕೂಡ ಹೈಕಮಾಂಡ್ ಆಶೀರ್ವದಿಸಿದರೆ ಸ್ಪರ್ಧೆಗೆ ರೆಡಿ ಎನ್ನುವ ಸಂದೇಶ ಸಾರುತ್ತಿದ್ದಾರೆ.
ಜಿದ್ದಾಜಿದ್ದಿನ ಮುನ್ಸೂಚನೆ: ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ದಿನದಿಂದ ದಿನಕ್ಕೆ ಆಕಾಂಕ್ಷಿಗಳ ಹೆಸರು ಹೆಚ್ಚುತ್ತಿವೆ. ಕೇಂದ್ರದಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನಾನಂತರ ಕಳೆಗುಂದಿದಂತೆ ಕಾಣುತ್ತಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳಿಂದ ಪ್ರಭಾವಿಗಳ ಹೆಸರು ಓಡಾಡಲಾರಂಭಿಸಿದ್ದು, ಜಿದ್ದಾಜಿದ್ದಿನ ಪೈಪೋಟಿಯ ಮುನ್ಸೂಚನೆ ನೀಡುತ್ತಿದೆ.
2021ರ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರ ನಿಧನದ ಅನುಕಂಪದ ಅಲೆಯಲ್ಲೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಸಚಿವ ಸತೀಶ ಜಾರಕಿಹೊಳಿ ನೀಡಿದ್ದ ತೀವ್ರ ಸ್ಪರ್ಧೆ ಈ ಬಾರಿಯ ಚುನಾವಣೆ ಕಣವನ್ನು ಪ್ರತಿಷ್ಠೆಯನ್ನಾಗಿಸಿದೆ. ಇದೇ ಕಾರಣದಿಂದ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿಗಳ ನಡುವೆಯೇ ಟಿಕೆಟ್ ಪೈಪೋಟಿ ನಡೆಯುವ ಸಾಧ್ಯತೆಗಳು ಕಂಡುಬರುತ್ತಿವೆ. ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಹೆಸರಿನ ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ ಹೆಬ್ಬಾಳ್ಕರ್ ಹೆಸರು ಪ್ರತಿಧ್ವನಿಸುತ್ತಿದೆ. ಕುಟುಂಬ ರಾಜಕಾರಣ ಬದಿಗಿಟ್ಟರೆ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಹೆಸರು ಕೂಡ ಕೇಳಿಬರುತ್ತಿದೆ.
ದಿ.ಸುರೇಶ್ ಅಂಗಡಿ ಅವರ ಪತ್ನಿ ಮಂಗಲ ಅಂಗಡಿ ಹಾಲಿ ಸದಸ್ಯರಾಗಿದ್ದರೂ ಈ ಬಾರಿ ಟಿಕೆಟ್ ಕೈತಪ್ಪುವ ಆತಂಕ ಎದುರಿಸುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಜನರ ನೇರ ಸಂಪರ್ಕ ಕಾಯ್ದಿಟ್ಟುಕೊಂಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಪಕ್ಷದ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ ಈ ಬಾರಿ ಬೆಳಗಾವಿಯಿಂದಲೇ ಪೈಪೋಟಿ ನೀಡುತ್ತೇನೆ. ಚಿಕ್ಕೋಡಿ ಕ್ಷೇತ್ರದ ಸ್ಪರ್ಧೆಗೆ ಸೂಚನೆ ನೀಡಿದರೂ ಸೈ ಎಂದಿದ್ದರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯಾಗಿದ್ದ ಶಂಕರಗೌಡ ಪಾಟೀಲ್, ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಸಂಜಯ ಪಾಟೀಲ್, ನ್ಯಾಯವಾದಿ ಎಂ.ಬಿ.ಝಿರಲಿ ಹೆಸರು ಮುಂಚೂಣಿಯಲ್ಲಿವೆ.
ಚಿಕ್ಕೋಡಿಯಲ್ಲೂ ಕುತೂಹಲ: ಚಿಕ್ಕೋಡಿ ಕ್ಷೇತ್ರದಲ್ಲಿ ಹಾಲಿ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಅವರಲ್ಲಿ ಎರಡನೇ ಬಾರಿಗೆ ಸ್ಪರ್ಧಿಸುವ ಉತ್ಸಾಹ ಎದ್ದು ಕಾಣುತ್ತಿದ್ದರೆ, ಪಕ್ಷ ಅಭ್ಯರ್ಥಿ ಬದಲಿಸಿದರೆ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ ಅಥವಾ ಮಾಜಿ ಸಂಸದ ರಮೇಶ್ ಕತ್ತಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಕಾಂಗ್ರೆಸ್ ಪಾಳಯದಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಕೂಡ ಪಕ್ಷ ಅವಕಾಶ ಕೊಟ್ಟರೆ ಚಿಕ್ಕೋಡಿ ಅಥವಾ ಬೆಳಗಾವಿ ಎರಡರಲ್ಲಿ ಯಾವುದಾದರೂ ‘ಒಕೆ’ ಎಂದಿದ್ದಾರೆ.
ಪಕ್ಷ ಬಯಸಿದರೆ ಚಿಕ್ಕೋಡಿಯಿಂದ ಚಿಕ್ಕೋಡಿ-ಸದಲಗಾ ಶಾಸಕರೂ ಆಗಿರುವ ಪುತ್ರ ಗಣೇಶ್ ಹುಕ್ಕೇರಿ ಅವರನ್ನು ಬೇಕಾದರೂ ಕಣಕ್ಕಿಳಿಸಲು ಸಿದ್ಧ ಎಂದಿರುವುದು ಚಿಕ್ಕೋಡಿ ಕ್ಷೇತ್ರದ ಚುನಾವಣೆ ಬೆಳವಣಿಗೆಗಳ ಬಗ್ಗೆ ಕುತೂಹಲ ಇಮ್ಮಡಿಸುತ್ತಿದೆ. ಇನ್ನು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರೊಟ್ಟಿಗೆ ಕಾಂಗ್ರೆಸ್ ಪ್ರವೇಶಿಸಿರುವ ಮಾಜಿ ಸಂಸದ ಅಮರಸಿಂಹ ಪಾಟೀಲ್ ಮತ್ತು ಸವದಿ ಪುತ್ರ ಚಿದಾನಂದ ಸವದಿ ಹೆಸರು ಕೂಡ ಕೇಳಿಬರುತ್ತಿದೆ.
ದೂರದ ಕ್ಷೇತ್ರ: ಕ್ಷೇತ್ರ ಮರುವಿಂಗಡಣೆ ಬಯಸುತ್ತಿರುವ ಹಾಗೂ ಕ್ಷೇತ್ರದ ವಿಷಯವಾಗಿ ತೀವ್ರ ಅಸಮಾಧಾನ ಹೊಂದಿರುವ ಚನ್ನಮ್ಮನ ಕಿತ್ತೂರು ಮತ್ತು ಖಾನಾಪುರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ದೂರದ ಉತ್ತರ ಕನ್ನಡ (ಕೆನರಾ) ಲೋಕಸಭಾ ಕ್ಷೇತ್ರದ ರಾಜಕೀಯ ಬೆಳವಣಿಗೆಗಳು ಜಿಲ್ಲೆಗೆ ಅಪರಿಚಿತ ಎನಿಸಿಕೊಳ್ಳುತ್ತಿವೆ. ಬಿಜೆಪಿಯಿಂದ ಹಾಲಿ ಸದಸ್ಯ ಅನಂತಕುಮಾರ ಹೆಗಡೆ ಜತೆಗೆ ವಿಧಾನಸಭೆ ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರಹೆಗಡೆ ಕಾಗೇರಿ ಜತೆಗೆ ಶ್ಯಾಮಸುಂದರ ಗಾಯಕವಾಡ ಹೆಸರು ಕೇಳಿಬರುತ್ತಿದೆ. ಸಚಿವ ಸ್ಥಾನದಿಂದ ವಂಚಿತರಾಗಿರುವ ಕಾಂಗ್ರೆಸ್‌ನ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೆಸರು ಲೋಕಸಭೆಗೆ ಚಲಾವಣೆಯಲ್ಲಿದ್ದರೂ ಪುತ್ರ ಪ್ರಶಾಂತ ದೇಶಪಾಂಡೆ ಅವರನ್ನು ಬಿಜೆಪಿಯಿಂದ ಸ್ಪರ್ಧೆಗೆ ಇಳಿಸಲು ತೆರೆಮರೆ ಪ್ರಯತ್ನ ನಡೆಯುತ್ತಿರುವುದು ಕುತೂಹಲ ಕೆರಳಿಸಿದೆ.