

ಮಂಡ್ಯ: ಲೋಕ ಪಾವನಿ ಮಹಿಳಾ ಸಹಕಾರ ಬ್ಯಾಂಕ್ ಅನ್ನು ವಿಕಾಸ ಸೌಹಾರ್ದ ಬ್ಯಾಂಕಿನೊಂದಿಗೆ ವಿಲೀನಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಬ್ಯಾಂಕಿನ ನಿರ್ದೇಶಕಿ ಸಿ.ಜೆ.ಸುಜಾತಾ ಆರೋಪಿಸಿದರು.
ಲೋಕ ಪಾವನಿ ಬ್ಯಾಂಕ್ ಸ್ಥಾಪಿಸಿ 28 ವರ್ಷ ಕಳೆದಿದೆ. ಈಗಿನ ಆಡಳಿತ ಮಂಡಳಿ ಬ್ಯಾಂಕ್ ನಷ್ಟದಲ್ಲಿದೆ ಎನ್ನುತ್ತಿದೆ. 16 ಜನರು ಸುಸ್ಥಿದಾರರಿದ್ದಾರೆ ಎನ್ನುವ ಮಾಹಿತಿ ನೀಡಲಾಗುತ್ತಿದೆ. ಆದರೆ ಈ ಎಲ್ಲರಿಗೂ ತಲಾ 10 ಲಕ್ಷ ರೂ ಸಾಲ ನೀಡಿದ್ದು, ಅದನ್ನು ವಸೂಲಿ ಮಾಡದೆ ನಷ್ಟವೆಂದು ತೋರಿಸಿ ವಿಲೀನಗೊಳಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸುಸ್ತಿದಾರರಿಂದ ಸಾಲ ವಸೂಲಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ ಈಗಿನ ಆಡಳಿತ ಮಂಡಳಿ ಸಾಲ ವಸೂಲಾತಿಗೆ ಮುಂದಾಗಿಲ್ಲ. ಇತ್ತೀಚಿಗೆ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಸದಸ್ಯರ ಗಮನಕ್ಕೆ ತಂದಿದ್ದೇವೆ. ಬ್ಯಾಂಕ್ ವಿಲೀನಗೊಳಿಸುವ ವಿಚಾರವನ್ನು ತಿಳಿಸಿದ್ದೇವೆ. ಇದಕ್ಕೆ ಸದಸ್ಯರು ಒಪ್ಪಿಗೆ ನೀಡಿಲ್ಲ ಎಂದರು.
ನಿರ್ದೇಶಕಿ ಜಯಶೀಲಮ್ಮ, ಸುನಂದ ಜಯರಾಂ, ಕೆ.ಸಿ.ನಾಗಮ್ಮ, ಸೌಭಾಗ್ಯಾ ಮಹಾದೇವ, ಸುಜಾತಾ ಸಿದ್ದಯ್ಯ, ಎ.ಜೆ.ವತ್ಸಲಾ ಇದ್ದರು.