

ಹನೂರು: ಪೊಲೀಸ್ ಇಲಾಖೆಯಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸುವ ಪೊಲೀಸರಿಗೆ ಡಿಜಿ ಮತ್ತು ಐಜಿಪಿ ಕೊಡ ಮಾಡುವ 2025ನೇ ಸಾಲಿನ ರಾಜ್ಯ ಮಟ್ಟದ ಪದಕವನ್ನು ರಾಮಾಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಲೋಕೇಶ್ ಅವರು ಬುಧವಾರ ಬೆಂಗಳೂರಿನಲ್ಲಿ ಸ್ವೀಕರಿಸಿದರು.
ಲೋಕೇಶ್ 1992ರಲ್ಲಿ ಪೊಲೀಸ್ ಪೇದೆಯಾಗಿ ನೇಮಕವಾಗಿ ಮಲೆಮಹದೇಶ್ವರ ಬೆಟ್ಟ, ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ತಲಾ 5 ವರ್ಷ, ಪೊಲೀಸ್ ಅರಣ್ಯ ಸಂಚಾರಿ ದಳ, ಅಗರ ಮಾಂಬಳ್ಳಿ ಠಾಣೆಯಲ್ಲಿ ತಲಾ 4 ವರ್ಷ, ಜಿಲ್ಲಾ ಅಪರಾಧ ದಳದಲ್ಲಿ 2 ವರ್ಷ ಹಾಗೂ ಹನೂರಿನಲ್ಲಿ 2 ವರ್ಷ ಸೇವೆ ಸಲ್ಲಿಸಿ ಎಎಸ್‌ಐ ಆಗಿ ಬಡ್ತಿ ಪಡೆದು, ಪ್ರಸ್ತುತ ಒಂದೂವರೆ ವರ್ಷದಿಂದ ರಾಮಾಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಅಕ್ರಮ ಗಾಂಜಾ ಸಾಗಣೆ, ಸಿಡಿಮದ್ದಿಗೆ ಜಾನುವಾರುಗಳ ಸಾವು, ಕಳ್ಳತನ ಪ್ರಕರಣ, ನಾಡ ಬಂದೂಕು ವಶ, ಇಸ್ಪೇಟ್ ಅಡ್ಡೆಯ ದಾಳಿ ಸೇರಿದಂತೆ ಇನ್ನಿತರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇವರ ಕಾರ್ಯವೈಖರಿಯನ್ನು ಪರಿಗಣಿಸಿ ಡಿಜಿ ಮತ್ತು ಐಜಿಪಿ ಕೊಡ ಮಾಡುವ 2025ರ ರಾಜ್ಯ ಮಟ್ಟದ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐಜಿಪಿ ಅಲೋಕ್ ಮೋಹನ್ ಅವರಿಂದ ಲೋಕೇಶ್ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.