ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಸಾಹಿತಿಗಳನ್ನು ಪರಿಗಣಿಸಿ

lokesh
Published on

ಮಡಿಕೇರಿ:

ಕೊಡಗು ಜಿಲ್ಲೆಯ ಸಾಹಿತಿಗಳನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವಂತೆ ಒತ್ತಾಯಿಸಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರೂ ಆದ ಕನ್ನಡ ಸಿರಿ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಜಿಲ್ಲಾಧಿಕಾರಿ ವೆಂಕಟ್ ರಾಜ್ ಮುಖಾಂತರ ಮಂಗಳವಾರ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಸಂಖ್ಯೆ ಸಾಕಷ್ಟಿದ್ದರೂ ಅಗತ್ಯ ಪರಿಗಣನೆ ಸಿಗುತಿಲ್ಲ. ಈ ನಿಟ್ಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುವಾಗ ಜಿಲ್ಲೆಯ ಅರ್ಹ ಸಾಹಿತಿಗಳನ್ನು ಗುರುತಿಸಿ ಗೌರವಿಸುವಂತೆ ಕನ್ನಡ ಸಿರಿ ಸ್ನೇಹ ಬಳಗ ಒತ್ತಾಯಿಸಿದೆ.

ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಲೋಕೇಶ್ ಸಾಗರ್ ಜಿಲ್ಲೆಯಲ್ಲಿ ಅನೇಕ ಸಾಹಿತಿಗಳು ಪ್ರಚಾರ ಬಯಸದೆ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿದ್ದಾರೆ. ಕತೆ, ಕಾದಂಬರಿ, ಕಾವ್ಯ ರಚನೆ ಸೇರಿದಂತೆ ಅನುವಾದ ಸಾಹಿತ್ಯದ ಕ್ಷೇತ್ರದಲ್ಲಿಯೂ ಮಹತ್ವದ ಸೇವೆ ಸಲ್ಲಿಸಿ ಅನೇಕ ಪುಸ್ತಕಗಳನ್ನು ರಚಿಸಿದ ಸಾಹಿತಿಗಳನ್ನು ಪ್ರಶಸ್ತಿಗಳನ್ನು ನೀಡುವಾಗ ಪರಿಗಣಿಸಬೇಕೆಂದು ಹೇಳಿದರು.

ಇತೀಚೆಗೆ ಅತ್ಯುನ್ನತ ಗೌರವವಾದ ಬೂಕರ್ ಪ್ರಶಸ್ತಿಯನ್ನು ಜಿಲ್ಲೆಯವರೇ ಆದ ದೀಪಾ ಬಾಸ್ತಿ ತನ್ನದಾಗಿಸಿರುವುದು ಕನ್ನಡ ಭಾಷಾ ಪ್ರೀಯರಿಗೆ ಸಿಕ್ಕ ಸನ್ಮಾನವಾಗಿದೆ. ಹಿರಿಯ ಸಾಹಿತಿಗಳನ್ನು ಗುರುತಿಸಿ ಗೌರವಿಸುವುದು ಕನ್ನಡ ಸಿರಿ ಬಳಗದ ಬೇಡಿಕೆಯಾಗಿದೆ ಎಂದು ಹೇಳಿದರು.

ಕನ್ನಡ ಸಿರಿ ಬಳಗದ ಪದಾಧಿಕಾರಿಗಳಾದ ಧನಂಜಯ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್, ಐಗೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ದಿನೇಶ್, ಗುರುದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net