ಬೆಂಗಳೂರು ಕೆ.ಆರ್ ಪುರ ತಹಸೀಲ್ದಾರ್ ಅಜಿತ್ ಕುಮಾರ್ ರೈ ಅವರ ಪುತ್ತೂರು ಸೊರಕೆಯ ಮನೆ ಮೇಲೆ ಲೋಕಾಯುಕ್ತ ದಾಳಿ

Ajith Kumar Rai
ಅಜಿತ್ ಕುಮಾರ್ ರೈ
Published on

ಪುತ್ತೂರು ಗ್ರಾಮಾಂತರ: ಬೆಂಗಳೂರಿನ ಕೆ.ಆರ್.ಪುರ ತಹಸೀಲ್ದಾರ್ ಹುದ್ದೆಯಲ್ಲಿದ್ದ ಕೆಎಎಸ್ ಅಧಿಕಾರಿ ಅಜಿತ್ ಕುಮಾರ್ ರೈ ಅವರ ಪುತ್ತೂರು ತಾಲೂಕಿನ ಸರ್ವೇ ಗ್ರಾಮದ ಸೊರಕೆಯ ಮನೆ ಮತ್ತು ಅವರ ನಿಕಟವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ಮಾಡಿದ್ದು, ಶೋಧ ನಡೆಸುತ್ತಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರು ಅಜಿತ್ ಕುಮಾರ್ ರೈ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇದೀಗ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಕೆ.ವಿ.ಅಶೋಕ್ ನೇತೃತ್ವದಲ್ಲಿ ಅಜಿತ್ ಅವರ ಮನೆ ಹಾಗೂ ಇತರ ಹತ್ತು ಸ್ಥಳಗಳ ಮೇಲೆ ಬುಧವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಅಜಿತ್ ಕುಮಾರ್ ಅವರ ಮನೆಯಲ್ಲಿ ಬೃಹತ್ ಪ್ರಮಾಣದ ನೋಟಿನ ಕಂತೆ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಅಜಿತ್ ಕುಮಾರ್ ರೈ ಈ ಹಿಂದೆ ಭೂಒತ್ತುವರಿದಾರರಿಗೆ ಸಹಕರಿಸಿದ್ದ ಆರೋಪದ ಮೇಲೆ ಅಮಾನತುಗೊಳಗಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net