

ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ ಪ್ರಕರಣ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲದಲ್ಲಿ ಸಾಬೀತಾಗಿದ್ದು, ಅಪರಾಧಿ ಮೀನುಗಾರಿಕೆ ನಿರ್ದೇಶನಾಲಯದ ನಿವೃತ್ತ ಜಂಟಿ ನಿರ್ದೇಶಕ ಗಂಗಾಧರ ವಿ.ಮಡ್ಡಿಕೇರಿಗೆ 5 ವರ್ಷಗಳ ಕಾಲ ಸಾದಾ ಸಜೆ ಮತ್ತು 1.30 ಕೋ.ರೂ. ದಂಡ ವಿಧಿಸಿದೆ.
ಗಂಗಾಧರ ವಿ. ಮಡ್ಡಿಕೇರಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರ ವಿರುದ್ಧ ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಅಪರಾಧಿಗೆ ಕಲಂ 13(1) (ಇ) ಮತ್ತು 13(2) ಲಂಚ ನಿರೋಧ ಕಾಯಿದೆ 1988ರಡಿ 5 ವರ್ಷಗಳ ಕಾಲ ಸಾದಾ ಸಜೆ ಹಾಗೂ 1.30 ಕೋ.ರೂ. ದಂಡ, ದಂಡ ಕಟ್ಟಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.