

ವಿಜಯಪುರ: ಕಳೆದ ಮೂರು ದಿನಗಳಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ದಾಖಲೆ ಪರಿಶೀಲಿಸಿದ ಲೋಕಾಯುಕ್ತ ಅಧಿಕಾರಿಗಳು ಹಲವು ಕರ್ತವ್ಯ ಲೋಪಗಳನ್ನು ಗುರುತಿಸಿದ್ದಾರೆ.
ಪುರಸಭೆ ಮತ್ತು ನಗರಸಭೆ ಕಾರ್ಯಾಲಯಗಳಲ್ಲಿ ಇ-ಖಾತಾ ಅರ್ಜಿಗಳನ್ನು ಅನಗತ್ಯ ವಿಳಂಬ ಮಾಡಿ ವಿಲೆ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರಲ್ಲದೇ, ಈ ವೇಳೆ ಮಧ್ಯವರ್ತಿಗಳ ಹಸ್ತಕ್ಷೇಪ ಕಂಡು ಬಂದಿದೆ. ತಹಸೀಲ್ದಾರ್ ತಾಲೂಕು ಕಚೇರಿಗಳಲ್ಲಿ ಪಿಂಚಣಿ ಯೋಜನೆಯ ಫಲಾನುಭವಿಗಳಿಗೆ ವಿಳಂಬವಾಗಿ ಪಿಂಚಣಿಯನ್ನು ಪಾವತಿ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಪೋತಿ ಖಾತೆಗಳ ಆಂದೋಲನದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಇರುವುದು ಸಕಾಲ ಅರ್ಜಿಗಳನ್ನು ವಿಳಂಬವಾಗಿ ವಿಲೆ ಮಾಡುತ್ತಿರುವುದು ಪತ್ತೆಯಾಗಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಕಲುಷಿತ ನೀರು ಬಳಕೆ ಮಾಡುತ್ತಿರುವುದು, ಕಳಪೆ ಆಹಾರ ಪೂರೈಸುತ್ತಿರುವುದು ಅಲ್ಲದೆ ಮೂಲ ಸೌಲಭ್ಯಗಳನ್ನು ನೀಡದಿರುವುದನ್ನು ಪತ್ತೆಯಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ಮುಂದುವರಿದು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಸಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು ಮತ್ತು ಅರ್ಜಿಗಳನ್ನು ವಿಳಂಬವಾಗಿ ವಿಲೆ ಮಾಡುತ್ತಿರುವುದು ಪತ್ತೆಯಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನು ಅವಧಿ ಮುಗಿದ ಔಷಧ ಮತ್ತು ಅವಧಿ ಮೀರುವ ಅಂಚಿನಲ್ಲಿರುವ ಔಷಧಗಳನ್ನು ದಾಸ್ತಾನಿನಲ್ಲಿಟ್ಟು ವಿತರಿಸುತ್ತಿರುವುದು ಪತ್ತೆಯಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳು ಅನಧಿಕೃತವಾಗಿ ಇರುವುದು ಹಾಗೂ ಸಿಬ್ಬಂದಿ ಫೋನ್-ಪೇ ಮೂಲಕ ಹಣ ಪಡೆದಿರುವುದು ಪತ್ತೆಯಾಗಿದೆ. ವಿಜಯಪುರ ನಗರ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಲೇ-ಔಟ್‌ಗಳ ಅರ್ಜಿಗಳನ್ನು ಅಕ್ರಮವಾಗಿ ವಿಲೆ ಮಾಡಿರುವುದು ಮತ್ತು ಅರ್ಜಿ ವಿಲೆ ಮಾಡದೆ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಅಬಕಾರಿ ಕಚೇರಿಗಳಲ್ಲಿ 10 ವರ್ಷಗಳ ಅವಧಿ ಮುಗಿದ ಮಾದಕ ವಸ್ತುಗಳನ್ನು ವಿಲೆ ಮಾಡದೆ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ. ಕೋಲ್ಹಾರ ತಹಸೀಲ್ದಾರ್ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಮಂಜುನಾಥ ಕಲ್ಲೂರ ಕರ್ತವ್ಯದ ವೇಳೆ ಮದ್ಯ ಸೇವನೆ ಮಾಡಿರುವುದು ಕಂಡು ಬಂದಿದ್ದರಿಂದ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಖಚಿತಪಡಿಸಿಕೊಳ್ಳಲಾಗಿದೆ. ಕೊಲ್ಹಾರ ಪುರಸಭೆ ಕಾರ್ಯಾಲಯ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೊಳಿಸುವ ವಾಹನಗಳ ಲೈಸನ್ಸ್ ಅವಧಿ ಮುಗಿದಿದ್ದರೂ ಅವುಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ನೇತೃತ್ವದಲ್ಲಿ ಕಾರ್ಯದರ್ಶಿ ಶ್ರೀನಾಥ ಕೆ, ನ್ಯಾಯಧೀಶ ನರಸಿಂಹ ಎಂ.ವಿ, ಎ.ವಿ. ಪಾಟೀಲ, ಮತ್ತಿತರನ್ನು ಒಳಗೊಂಡ ಒಟ್ಟು 13 ತಂಡಗಳು ಕಾರ್ಯಾಚರಣೆ ನಡೆಸಿ ಸುಮಾರು 55 ಈ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ್ದಾಗಿ ಲೋಕಾಯುಕ್ತರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.