

ಹುಬ್ಬಳ್ಳಿ: ಸಾರ್ವಜನಿಕ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಉಣಕಲ್ಲ್ ಕೆರೆ ಸೇರಿ ಎರಡು ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಉಣಕಲ್ಲ್ ಕೆರೆಗೆ ಹೊಂದಿಕೊಂಡು ಆರ್ಎನ್ಎಸ್ ಗ್ರುಪ್ನವರು ನಿರ್ವಿುಸುತ್ತಿರುವ ಗಾಲ್ಪ್ ಮೈದಾನದಿಂದ ಕೆರೆಯ ನೀರಿನ ನೈಸರ್ಗಿಕ ಹರಿವಿಗೆ ಅಡ್ಡಿಯುಂಟಾಗುತ್ತಿದೆ ಎಂದು ಹಸಿರು ಸೇನೆ ಸಂಘಟನೆಯ ರಾಯನಗೌಡ್ರ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಧಾರವಾಡದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ಮುಗಿಸಿ ಹುಬ್ಬಳ್ಳಿಗೆ ಆಗಮಿಸುವ ವೇಳೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ ಉಣಕಲ್ಲ್ ಕೆರೆಗೆ ಭೇಟಿ ನೀಡಿದರು.
ಕೆರೆಯ ಬಳಿ ಗಾಲ್ಪ್ ಮೈದಾನ ನಿರ್ವಣಕ್ಕೆ ಅನುಮತಿ ನೀಡಿರುವುದು, ಕೆರೆಯ ನೀರಿನ ಹರಿವಿಗೆ ಅಡ್ಡಿ ಉಂಟಾಗಿರುವ, ಇನ್ನಿತರ ವಿಷಯಗಳ ಕುರಿತು ವರದಿ ಸಲ್ಲಿಸುವಂತೆ ಹು-ಧಾ ಮಹಾನಗರ ಪಾಲಿಕೆ, ಹು-ಧಾ ನಗರಾಭಿವೃದ್ಧಿ ಇಲಾಖೆ, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳಿಗೆ ಲೋಕಾಯುಕ್ತರು ಈ ವೇಳೆ ಸೂಚಿಸಿದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಸ್ಮಾರ್ಟ್ ಸಿಟಿ ಎಂಡಿ ರುದ್ರೇಶ ಗಾಳಿ, ಭೂದಾಖಲೆಗಳ ಉಪ ನಿರ್ದೇಶಕ ಮೋಹನ ಶಿವಣ್ಣವರ, ತಹಸೀಲ್ದಾರ ಕಲಗೌಡ, ಇತರರು ಇದ್ದರು.
ಸಿದ್ಧಾರೂಢ ಮಠದ ಬಳಿ ಯುಜಿಡಿ ಬ್ಲಾಕ್ ಆಗಿ ಖಾಸಗಿ ಸ್ಥಳದಲ್ಲಿ ಕೊಳಚೆ ನೀರು ಹರಿಯುವುದನ್ನು ತಡೆಗಟ್ಟುವಲ್ಲಿ ಪಾಲಿಕೆ ವಿಫಲವಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತರು ಪರಿಶೀಲಿಸಿದರು. ಆದರೆ, ಈ ವೇಳೆ ಪಾಲಿಕೆ ಕ್ರಮ ಕೈಗೊಂಡಿರುವುದು ಲೋಕಾಯುಕ್ತರ ಗಮನಕ್ಕೆ ತರಲಾಯಿತು.
ಬಳಿಕ ಲೋಕಾಯುಕ್ತರು ಸಿದ್ಧಾರೂಢ ಸ್ವಾಮಿ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.