ಲೋಕಾಯುಕ್ತ ಬಲೆಗೆ ಬಿದ್ದ ಅಕ್ರಮ ಆಸ್ತಿ ಸಂಪಾದಿಸಿದ ಅಧಿಕಾರಿಗಳು

14-RNR-05A
Published on

ರಾಣೆಬೆನ್ನೂರ: ನಗರದ ಎರಡು ಅಧಿಕಾರಿಗಳ ಮನೆ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ 3.02 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು, ಸೈಟು ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿಯ ಬೀರೇಶ್ವರ ನಗರದ ಸವಣೂರ ತಾಪಂ ಪ್ರಭಾರ ಇಒ ಬಸವರಾಜ ಶಿಡೇನೂರ ಹಾಗೂ ಮಾರುತಿ ನಗರದ ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ ಮನೆ ಮೇಲೆ ದಾಳಿ ನಡೆದಿರುವುದು. ದಾವಣಗೆರೆ ಹಾಗೂ ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಮಧುಸೂದರನ್​ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಮನೆಯಲ್ಲಿರುವ ದಾಖಲಾತಿ, ಚಿನ್ನಾಭರಣ ಹಾಗೂ ನಗದು ಪರಿಶೀಲನೆ ನಡೆಸಿದ್ದಾರೆ.

ಪ್ರಭಾರ ಇಒ ಬಳಿ 1.67 ಕೋಟಿ ರೂ. ಜಪ್ತಿ...

ತಾಪಂ ಪ್ರಭಾರ ಇಒ ಬಸವರಾಜ ಶಿಡೇನೂರ ಬಳಿ 1.67 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದರಲ್ಲಿ 1.50 ಕೋಟಿ ರೂ. ಮೌಲ್ಯದ 6 ಸೈಟು, 50 ಲಕ್ಷ ರೂ. ಮೌಲ್ಯದ ಒಂದು ಮನೆ, ಮನೆಯಲ್ಲಿ 4 ಸಾವಿರ ರೂ. ನಗದು, 48.97 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ, 13 ಲಕ್ಷ ರೂ. ಮೌಲ್ಯದ ಒಂದು ಕಾರು ಹಾಗೂ 40.10 ಲಕ್ಷ ರೂ. ಮೌಲ್ಯದ ಇತರ ಆಸ್ತಿ ಒಳಗೊಂಡಿದೆ.

ಕಂದಾಯ ನಿರೀಕ್ಷಕನ ಬಳಿ 1.35 ಕೋಟಿ ರೂ. ಆಸ್ತಿ ಪತ್ತೆ...

ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ 1.35 ಕೋಟಿ ರೂ. ಆಸ್ತಿ ಪತ್ತೆಯಾಗಿದೆ. ಇದರಲ್ಲಿ 13.50 ಲಕ್ಷ ರೂ. ಮೌಲ್ಯದ ಎರಡು ಸೈಟು, 90 ಲಕ್ಷ ರೂ. ಮೌಲ್ಯದ ಎರಡು ಮನೆ, 22.51 ಲಕ್ಷ ರೂ. ಮೌಲ್ಯದ 11 ಎಕರೆ ಜಮೀನು, 1.45 ಲಕ್ಷ ರೂ. ನಗದು, 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ, 15 ಲಕ್ಷ ರೂ. ಮೌಲ್ಯದ ಕಾರು ಹಾಗೂ 57 ಲಕ್ಷ ರೂ. ಮೌಲ್ಯದ ಇತರ ಆಸ್ತಿ ಒಳಗೊಂಡಿದೆ.

ಇಬ್ಬರು ಅಧಿಕಾರಿಗಳ ಮನೆಯಲ್ಲಿ ದೊರೆತ ದಾಖಲಾತಿಯನ್ನು ಜಪ್ತಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net