ಅಮರಗೋಳ ಕೃಷ್ಣಾ ನದಿ ತೀರಕ್ಕೆ ಲೋಕಾಯುಕ್ತ ಎಸ್‌ಪಿ ಭೇಟಿ

tangadagi 18-1
ತಂಗಡಗಿ ಸಮೀಪದ ಅಮರಗೋಳ ಗ್ರಾಮದ ಹತ್ತಿರ ಅಕ್ರಮವಾಗಿ ಮಣ್ಣು ಅಗೆದಿದ್ದರಿಂದ ಭಾರಿ ತಗ್ಗು ಆಗಿರುವ ಪ್ರದೇಶಕ್ಕೆ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ ಠಕ್ಕನವರ್ ಭೇಟಿ ನೀಡಿ ಪರಿಶೀಲಿಸಿದರು.
Published on

ತಂಗಡಗಿ: ಸಮೀಪದ ಅಮರಗೋಳ ಗ್ರಾಮದ ಬಳಿಯ ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮವಾಗಿ ಎರೆ ಮಣ್ಣು ಸಾಗಿಸಲಾಗುತ್ತಿರುವ ಸ್ಥಳಕ್ಕೆ ಸೋಮವಾರ ವಿಜಯಪುರ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆನಂದ ಠಕ್ಕನವರ ತಮ್ಮ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಿದರು.

ಅವರ ಕಣ್ಣೆದುರೆ ಮಣ್ಣು ಅಗೆದಾಗ ಉಂಟಾದ ಭಾರಿ ಮತ್ತು ಆಳವಾದ ಗುಂಡಿ, ಮಣ್ಣು ಎತ್ತುವ ಹಿಟಾಚಿ ಯಂತ್ರ, ಮಣ್ಣು ಸಾಗಿಸುವ ಟ್ರಾೃಕ್ಟರ್, ಟಿಪ್ಪರ್ ಕಂಡು ಹೌಹಾರಿದ ಅವರು ಎಲ್ಲವನ್ನೂ ದಾಖಲಿಸಿಕೊಂಡು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ದೂರುದಾರ ತಂಗಡಗಿ ಗ್ರಾಪಂ ಮಾಜಿ ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷ ಸಂಗಯ್ಯ ಸಾರಂಗಮಠ ಅವರಿಗೆ ತಿಳಿಸಿದರು.

ಈ ಕುರಿತು ‘ವಿಜಯವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಸಾರಂಗಮಠ, ತಂಗಡಗಿಯಿಂದ ಹಿಡಿದು ಅಯ್ಯನಗುಡಿಯವರೆಗೂ ಕೃಷ್ಣಾ ನದಿ ತೀರದಲ್ಲಿರುವ ಲವತ್ತಾದ ಕಪ್ಪು ಎರೆ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ತಡೆಯುವಂತೆ ಕೋರಿ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ, ತಹಸೀಲ್ದಾರ್ ಸೇರಿ ಹಲವರಿಗೆ ಮನವಿ ಸಲ್ಲಿಸಿದ್ದೆ. ಅದರ ಪ್ರತಿಯನ್ನು ಲೋಕಾಯುಕ್ತರಿಗೂ ನೀಡಿದ್ದೆ. ನನ್ನ ದೂರು ಪತ್ರ ಆಧರಿಸಿ ಲೋಕಾಯುಕ್ತರು ವಾಸ್ತವ ತನಿಖೆ ನಡೆಸಲು ಆಗಮಿಸಿದ್ದರು. ಇಷ್ಟೊಂದು ಪ್ರಮಾಣದಲ್ಲಿ ಮಣ್ಣು ಸಾಗಿಸುತ್ತಿದ್ದರೂ ಇದನ್ನು ತಡೆಯಲು ತಹಸೀಲ್ದಾರ್ ಅಥವಾ ಕೆಬಿಜೆಎನ್‌ಎಲ್ ಅಧಿಕಾರಿಗಳು ಮುಂದಾಗದಿರುವುದು ವಿಚಿತ್ರವಾಗಿದೆ. ಇವರನ್ನು ವಿಚಾರಣೆ ನಡೆಸಲು ನೋಟಿಸ್ ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ರೈತರಿಗೆ ಮಣ್ಣು ಬೇಕಾದಲ್ಲಿ ತಹಸೀಲ್ದಾರ್ ಅಥವಾ ಕೆಬಿಜೆಎನ್‌ಎಲ್ ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡು ಬಳಸಿಕೊಳ್ಳಲು ಯಾರದ್ದೂ ತಕರಾರು ಇಲ್ಲ. ಆದರೆ, ಮಧ್ಯವರ್ತಿಗಳು ಟ್ರಿಪ್‌ಗೆ 5,000 ರೂನಂತೆ ಹಣ ಪಡೆದು ಅಕ್ರಮವಾಗಿ ಮಣ್ಣು ಸಾಗಿಸುತ್ತಿರುವುದು ಸರ್ಕಾರಕ್ಕೆ ರಾಜಸ್ವ ವಂಚಿಸಿದಂತಾಗಿದೆ. ಈ ಬಗ್ಗೆ ತಹಸೀಲ್ದಾರ್, ಕೆಬಿಜೆಎನ್‌ಎಲ್ ಮತ್ತು ಪೊಲೀಸ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಸಂಶಯಕ್ಕೆ ಕಾರಣವಾಗಿದೆ. ಇದನ್ನು ಪ್ರತಿಭಟಿಸಿ ಮಾ.18ರಂದು ತಾಲೂಕು ಆಡಳಿತ ಸೌಧ ಎದುರು ಧರಣಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಲೋಕಾಯುಕ್ತ ಪಿಐ ಪ್ರತಿಕ್ರಿಯೆ: ದೂರು ಬಂದ ಹಿನ್ನೆಲೆ ಸ್ಥಳ ತನಿಖೆ ನಡೆಸಿದ್ದೇನೆ. ಮಣ್ಣು ಸಾಗಿಸುವವರ ಹತ್ತಿರ ಅಧಿಕಾರಿಗಳು ನೀಡಿರುವ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲ. ಹೀಗಾಗಿ ಆ ಕುರಿತ ವರದಿ ಸಂಗ್ರಹಿಸಿದ್ದು ಮುಂದಿನ ಕ್ರಮ ಜರುಗಿಸಲಾಗುತ್ತದೆ. ತಂಗಡಗಿಯಲ್ಲಿರುವ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆ ಮತ್ತು ಜೆಜೆಎಂ ಕಾಮಗಾರಿ ನಡೆಯುತ್ತಿರುವ ನಾಲತವಾಡ ಭಾಗಕ್ಕೂ ಭೇಟಿ ನೀಡಿ ಪರಿಶೀಲಿಸಲಾಗಿದ್ದು ವಾಸ್ತವ ವರದಿ ಸಂಗ್ರಹಿಸಲಾಗಿದೆ ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಆನಂದ ಠಕ್ಕನವರ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net