

ಅಫಜಲಪುರ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ, ಉಪಾಹಾರವಿಲ್ಲ, ಸಂತಾನಶಕ್ತಿ ಹರಣ ಚಿಕಿತ್ಸೆಗೆ ಹಣ ವಸೂಲಿ, ಭೂ ಸರ್ವೇಯರ್‌ಗಳ ಕಾರ್ಯ, ಸರಿಯಾಗಿ ವಿತರಿಸದ ಪಡಿತರ, ದನಗಳ ವಾಸಕ್ಕೂ ಯೋಗ್ಯವಿಲ್ಲದಂಥ ಸರ್ಕಾರಿ ಆಸ್ಪತ್ರೆ. ಹೀಗೆ ಸಾಲು-ಸಾಲು ಸಮಸ್ಯೆಗಳು ಅಫಜಲಪುರದಲ್ಲಿ ಬುಧವಾರ ನಡೆದ ಲೋಕಾಯುಕ್ತ ಅಧಿಕಾರಿಗಳ ಅಹವಾಲು ಸ್ವೀಕಾರ ವೇಳೆ ಅನಾವರಣಗೊಂಡವು.
ಬಂಕಲಗಾ ಗ್ರಾಮದಲ್ಲಿ ಭೀಮಾ ಏತ ನೀರಾವರಿ ಕಾಲುವೆ ೧.೨ ಎಕರೆ ಜಮೀನಿನಲ್ಲಿ ಹಾದು ಹೋಗಿದೆ. ಆದರೆ ಹೆಚ್ಚುವರಿಯಾಗಿ ಒಂದು ಎಕರೆ ತೋರಿಸುತ್ತಿದ್ದು, ಪರಿಹಾರ ನೀಡುತ್ತಿಲ್ಲ. ಸರಿ ಮಾಡಿ ಎಂದು ೧೦ ಸಾವಿರ ರೂ. ಕಟ್ಟಿಸಿಕೊಂಡರೂ ಕ್ರಮ ಕೈಗೊಂಡಿಲ್ಲ. ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ನಿವೃತ್ತ ಅಧಿಕಾರಿ ಗುರುಶಾಂತಪ್ಪ ಗುಣಾರಿ ಲೋಕಾಯುಕ್ತರ ಗಮನಕ್ಕೆ ತಂದರು.
ಸರ್ವೇಯರ್‌ಗಳು ನಿಷ್ಪಕ್ಷಪಾತ ಕೆಲಸ ಮಾಡಬೇಕು. ಇಲ್ಲದಿದ್ದರೆ ಜಮೀನುದಾರರ ಮಧ್ಯೆ ದ್ವೇಷ ಬೆಳೆದು ಕೊಲೆ ಹಂತಕ್ಕೆ ತಲುಪುತ್ತದೆ. ಸಣ್ಣ ಪುಟ್ಟ ತಪ್ಪುಗಳನ್ನು ಮಾಡಬೇಡಿ ಎಂದು ಸೂಚಿಸಿದ ಲೋಕಾ ಎಸ್‌ಪಿ ಜಾನ್ ಆ್ಯಂಟೋನಿ, ಕೆರೆಯಲ್ಲಿ ಹೂಳೆತ್ತಿ ನೀರು ಶೇಖರಣೆಗೆ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಾಂತಪ್ಪ ಜಾಧವ್‌ಗೆ ಸಲಹೆ ನೀಡಿದರು.
ಎಲ್ಲ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಅಳವಡಿಸಬೇಕು. ಪಟ್ಟಣಕ್ಕೆ ಸ್ವಚ್ಛ ನೀರು ಪೂರೈಸಬೇಕು. ನಾಗರಿಕ ಸರಬರಾಜು ಅಂಗಡಿಯವರು ತಿಂಗಳಲ್ಲಿ ನಾಲ್ಕೈದು ದಿನ ಅಂಗಡಿ ತೆರೆಯುತ್ತಾರೆ ಎಂಬ ದೂರು ಕೇಳಿಬಂದಿದ್ದು, ಸತಾಯಿಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ ಸಾವಿತ್ರಿಗೆ ನೀಡಿದರು.
ಬಿಇಒ ಕಚೇರಿಗೆ ಭೇಟಿ ನೀಡಿದ ಲೋಕಾಯುಕ್ತರು, ಸಾದಿಲ್ವಾರು ಖರೀದಿಗೆ ೧೧ ಲಕ್ಷ ರೂ. ದುರ್ಬಳಕೆ ಕುರಿತ ದಾಖಲೆ ಪರಿಶೀಲಿಸಿದರು. ಡಿವೈಎಸ್‌ಪಿ ಗೀತಾ ಬೇನಾಳ, ಸಿಪಿಐ ರಾಜಶೇಖರ ಹಳಗೋದಿ, ತಹಸೀಲ್ದಾರ್ ಸಂಜೀವಕುಮಾರ ದಾಸರ, ಅಧಿಕಾರಿಗಳಾದ ಹಾಜಿಮಲಂಗ್ ಇಂಡಿಕರ್, ಬಾಬುರಾವ ಜ್ಯೋತಿ, ಲಕ್ಷ್ಮೀಕಾಂತ ಬಿರಾದಾರ, ಶಾಂತಪ್ಪ ಜಾಧವ್, ವಿಶ್ವನಾಥ ಕೆ., ಎಚ್.ಎಸ್. ಗಡಗಿಮನಿ, ಕೆ.ಎಂ. ಕೋಟೆ, ಅಜಯ, ಮೆಹಬೂಬ್ ಅಲಿ ಇತರರಿದ್ದರು.
ಆಸ್ಪತ್ರೆ ಅಧಿಕಾರಿಗೆ ತರಾಟೆ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತರು ಭೇಟಿ ನೀಡಿ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಇಲ್ಲಿ ಮನುಷ್ಯರಲ್ಲ, ಜಾನುವಾರು ವಾಸಕ್ಕೂ ಯೋಗ್ಯವಿಲ್ಲ. ಡಿ ಗ್ರೂಪ್ ನೌಕರರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಶೌಚಗೃಹ ಬಳಕೆ ಇಲ್ಲ ಎಂದು ವೈದ್ಯಾಧಿಕಾರಿ ಡಾ.ವಿನೋದಕುಮಾರ ರಾಠೋಡ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸೌಲಭ್ಯ ನೀಡಲು ಆಗದಿದ್ದರೆ ಕೆಲಸ ಬಿಟ್ಟು ಹೋಗಿ ಎಂದು ಹರಿಹಾಯ್ದರು.
ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ೨ ಸಾವಿರ ರೂ. ಲಂಚ, ಅಲ್ಲೆ ಪರಿಹಾರ: ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಕರಜಗಿಯ ಮಹಿಳೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಡಿ ಗ್ರೂಪ್ ನೌಕರ ೨೦೦೦ ರೂ. ಲಂಚ ತೆಗೆದುಕೊಂಡಿದ್ದಾನೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಗೀತಾ ಬೇನಾಳ ಮುಂದೆ ಮಹಿಳೆ ತಾಯಿ ದೂರಿದರು. ಈ ಬಗ್ಗೆ ವಿಚಾರಿಸಿದಾಗ ನೌಕರ ಲಕ್ಕಪ್ಪ ಹಣ ಪಡೆದಿದ್ದು ಒಪ್ಪಿಕೊಂಡ. ಹಣ ಮರಳಿ ಕೊಡಿಸಿ ಪ್ರಕರಣ ದಾಖಲಿಸಿದರು. ಹೆರಿಗೆಗೆ ಗರ್ಭಿಣಿಯರನ್ನು ನಾಲ್ಕೈದು ಗಂಟೆ ಕಾಯಿಸಿ ಕೊನೇ ಘಳಿಗೆಯಲ್ಲಿ ನಮ್ಮಿಂದ ಆಗಲ್ಲ. ಕಲಬುರಗಿಗೆ ಹೋಗಿ ಎನ್ನುತ್ತಾರೆ ಎಂಬ ದೂರು ಕೇಳಿಬಂದಿತು.
ಸ್ಮಶಾನಭೂಮಿ ಮನೆಗೆ ಕೊಟ್ಟ ಪಿಡಿಒ: ಬಳೂರ್ಗಿ ಸ್ಮಶಾನ ಭೂಮಿಯನ್ನು ಸರ್ಕಾರಿ ವಸತಿ ಯೋಜನೆಯಡಿ ಮನೆ ಕಟ್ಟಲು ನೀಡಲಾಗಿದೆ ಎಂದು ಸಾರ್ವಜನಿಕರು ದೂರಿದರು. ಕ್ರಮ ಕೈಗೊಳ್ಳಬೇಕಾದ ಪಿಡಿಒ ಮಹಾಂತೇಶ ಸಾಲಿಮಠ ಅಕ್ರಮಕ್ಕೆ ಅವಕಾಶ ನೀಡಿದ್ದು, ಅವರ ವಿರುದ್ಧ ಕ್ರಮಕ್ಕೆ ಲೋಕಾ ಅಧಿಕಾರಿಗಳು ಸೂಚಿಸಿದರು.