

ವಿಜಯಪುರ: ಪ್ರತಿಯೊಂದು ಚುನಾವಣೆಯೂ ವಿಭಿನ್ನವಾಗಿ ಇರುವುದರಿಂದ ಎಲ್ಲರಿಗೂ ನೂರಕ್ಕೆ ನೂರು ಟಿಕೆಟ್ ಕೊಟ್ಟ ಉದಾಹರಣೆಗಳು ಇಲ್ಲ. ಸಮೀಕ್ಷೆ, ಶಾಸಕರ ಕಾರ್ಯವೈಖರಿ ಸೇರಿ ಎಲ್ಲಾ ಮಾನದಂಡಗಳನ್ನು ನೋಡಿಕೊಂಡು ಟಿಕೆಟ್ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಡಿಯೂರಪ್ಪನವರು ಸಂಸದೀಯ ಮಂಡಳಿ ಸದಸ್ಯರು. ಅವರಿಗೆ ಮಾಹಿತಿ ಬಂದಿರಬಹುದು. ಆದರೆ 70 ವರ್ಷ ವಯಸ್ಸು ದಾಟಿದವರಿಗೆ ಟಿಕೆಟ್ ನೀಡಬೇಕೆ? ಬೇಡವೇ? ಎನ್ನುವ ವಿಚಾರ ನಮ್ಮ ಮುಂದೆ ಇಲ್ಲ. ಪ್ರತಿಯೊಂದು ಮತಕ್ಷೇತ್ರದ ಬಗ್ಗೆ ಪಕ್ಷದ ಸಂಸದೀಯ ಮಂಡಳಿಯಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ನೂರಕ್ಕೆ ನೂರರಷ್ಟು ಎಲ್ಲರಿಗೂ ಟಿಕೆಟ್ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಎಂದು ಸ್ಪಷ್ಟಪಡಿಸಿದರು.
ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಈ ಪ್ರಕರಣದ ವಿಚಾರದಲ್ಲಿ ತನಿಖೆ ನಡೆಸಲು ಲೋಕಾಯುಕ್ತರು ಸರ್ವ ಸ್ವತಂತ್ರರು. ನ್ಯಾಯಾಲಯದ ತೀರ್ಮಾನಕ್ಕೆ ನಾವೆಲ್ಲಾ ತಲೆ ಬಾಗಬೇಕಾಗುತ್ತದೆ. ಲೋಕಾಯುಕ್ತರು ತನಿಖೆ ನಡೆಸಿದ್ದಾರೆ. ಇದರಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದೆ. ಈ ರೀತಿ ಆಪಾದನೆ ಮಾಡುವ ಮೂಲಕ ಅವರು ಮಾಡಿರುವ ಕರ್ಮ, ಪಾಪ, ಭ್ರಷ್ಟಾಚಾರ ತೊಳೆದು ಹೋಗುವುದಿಲ್ಲ. ಅದು ಮತ್ತೆ ಬಂದೆ ಬರುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿಗಳು ಹರಿಹಾಯ್ದರು. ಕಾಂಗ್ರೆಸ್ ಅವಧಿಯಲ್ಲಾದ ಭ್ರಷ್ಟಾಚಾರದ 59 ಪ್ರಕರಣಗಳನ್ನು ಎಸಿಬಿಗೆ ಕೊಟ್ಟದ್ದು, ಲೋಕಾಯುಕ್ತಕ್ಕೆ ಕೊಡುತ್ತೇವೆ. ಅಲ್ಲಿ ಕಾಂಗ್ರೆಸ್ ಬಣ್ಣ ಬಹಳಷ್ಟು ಬಯಲಾಗುತ್ತದೆ ಎಂದರು.
ಡಿ.ಕೆ. ಶಿವಕುಮಾರ್ ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಆ ಪುಣ್ಯಾತ್ಮನಿಗೂ ಭ್ರಷ್ಟಾಚಾರಕ್ಕೂ ಬಿಡದ ನಂಟಿದೆ. ಅವರ ಬಾಯಲ್ಲಿ ಈ ರೀತಿ ಬರುವುದು ಸಹಜ ಎಂದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರನ್ನು ‘ಹಿಂದೂ ಉಗ್ರ’ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಸಿಎಂ, ಕಾಂಗ್ರೆಸ್‌ನವರಿಗೆ ದೇಶಭಕ್ತರು ಉಗ್ರರ ಹಾಗೆ ಕಾಣುತ್ತಾರೆ, ನಮಗೆ ದೇಶದ್ರೋಹಿಗಳು ಉಗ್ರರ ಹಾಗೇ ಕಾಣುತ್ತಾರೆ ಎಂದು ವ್ಯಂಗ್ಯವಾಡಿದರು.