

ಅರಕೇರಾ: ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳು, ನೌಕರರು ಸಾರ್ವಜನಿಕರನ್ನು ಅನಾವಶ್ಯಕವಾಗಿ ಅಲೆದಾಡಿಸಬಾರದು ಎಂದು ಲೋಕಾಯುಕ್ತ ಎಸ್ಪಿ ಸತೀಶ ಎಸ್ ಚಿಟಗುಪ್ಪಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಕರ್ನಾಟಕ ಲೋಕಾಯುಕ್ತ ರಾಯಚೂರು ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸರ್ಕಾರಿ ಅಧಿಕಾರಿಗಳು, ನೌಕರರು ಸರ್ಕಾರಿ ಸೇವೆ ಒದಗಿಸುವಲ್ಲಿ ಲಂಚಕ್ಕೆ ಬೇಡಿಕೆ, ಅನವಶ್ಯಕ ವಿಳಂಬ ಮಾಡುತ್ತಿದ್ದರೆ, ಸರ್ಕಾರಿ ಭೂಮಿ ಒತ್ತುವರಿ, ಕಾಮಗಾರಿಗಳಲ್ಲಿ ಅಕ್ರಮ ಅಥವಾ ಕಳಪೆಯಾಗಿದ್ದರೆ ದೂರು ನೀಡಬಹುದು ಎಂದರು.
ಇದನ್ನೂ ಓದಿ: ಸಕಾಲಕ್ಕೆ ಕೃಷಿ ತಜ್ಞರ ಸಲಹೆ ಪಡೆಯಿರಿ
ಸಾರ್ವಜನಿಕರು ಜಮೀನು, ಕುಡಿಯುವ ನೀರು, ಸರ್ಕಾರಿ ಕಟ್ಟಡ, ಪೊಲೀಸ್ ಸ್ಟೇಷನ್ ಸೇರಿ ಇನ್ನಿತರ ಕುಂದು ಕೊರತೆಗಳಿರುವ ಬಗ್ಗೆ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದರು. ಬಂಡೆಗುಡ್ಡದಲ್ಲಿ ಜೆಜೆಎಂ ಕಾಮಗಾರಿ ಅವೈಜ್ಞಾನಿಕ, ಆಶ್ರಮ ಶಾಲಾ ಕಟ್ಟಡ ಅರೆಬರೆ ನಿರ್ಮಾಣವಾಗಿದೆ ಎಂದು ಗ್ರಾಮಸ್ಥ ತಮ್ಮಣ್ಣ ರಾಠೋಡ ದೂರು ಸಲ್ಲಿಸಿದರು. ಪಟ್ಟಣದಲ್ಲಿ ಅಪರಾಧ ತಡೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಠಾಣೆ ಸ್ಥಾಪಿಸಬೇಕು ಎಂದು ಗ್ರಾಮಸ್ಥ ಹನುಮೇಶ ನಾಯಕ ಕೋರಿದರು.
ಸಾರ್ವಜನಿಕರು ಸಲ್ಲಿಸಿದ ದೂರುಗಳಿಗೆ ಹದಿನೈದು ದಿನಗಳ ಒಳಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಉತ್ತರಿಸಬೇಕು. ಸೂಕ್ತ ದಾಖಲೆ ಮತ್ತು ಪರಿಹಾರ ಒದಗಿಸದಿದ್ದಲ್ಲಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಲೋಕಾಯುಕ್ತ ಡಿಎಸ್ಪಿ ರವಿ ಪುರುಷೋತ್ತಮ, ಇನ್ಸ್‌ಪೆಕ್ಟರ್ ಕಾಲಪ್ಪ ಬಡಿಗೇರ, ತಹಸೀಲ್ದಾರ್ ಅಮರೇಶ ಬಿರಾದರ, ತಾಪಂ ಇಒ ಅಣ್ಣರಾವ್, ಸಿಬ್ಬಂದಿ ಗೋಪಾಲ, ಶರೀಫ, ಅಶೋಕ, ಶಿವರಾಮ, ಅಜೀದ್, ಕನಕರೆಡ್ಡಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.