

ಶಿವಮೊಗ್ಗ: ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಔಷಧ ವಿಭಾಗದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದ್ದು ಎಆರ್‌ಪಿ ಸ್ಟಿಕ್ಕರ್ ಇರುವ 3.5 ಲಕ್ಷ ರೂ. ಮೌಲ್ಯದ ಔಷಧಗಳು ಪತ್ತೆಯಾಗಿವೆ. ಈ ಸಂಬಂಧ ಆಸ್ಪತ್ರೆಯ ಫಾರ್ಮಸಿಸ್ಟ್‌ಗಳಿಂದ ಸಮಂಜಸ ಉತ್ತರ ಬಾರದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಚ್.ಮಂಜುನಾಥ ಚೌಧರಿ ನೇತೃತ್ವದ ತಂಡ ಸೋಮವಾರ ಸಂಜೆ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಔಷಧ ದಸ್ತಾನು ವಿಭಾಗದಲ್ಲಿ ಪರಿಶೀಲನೆ ನಡೆಸಿತು. ಆಸ್ಪತ್ರೆಯ ಕ್ಷ ಕಿರಣ ಕೊಠಡಿ ಪಕ್ಕದ ಒಂದು ಕೊಠಡಿಯಲ್ಲಿ ಅನಧಿಕೃತವಾಗಿ ಲಕ್ಷಾಂತರ ರೂ. ಮೌಲ್ಯದ ಔಷಧ ಸಂಗ್ರಹಿಸಿರುವುದು ಪತ್ತೆಯಾಗಿದೆ.
ಈ ಬಗ್ಗೆ ಮೆಗ್ಗಾನ್ ಆಸ್ಪತ್ರೆ ಫಾರ್ಮಸಿ ವಿಭಾಗದ ಸಹಾಯಕ ನಿರ್ದೇಶಕ ಗೋಪಿನಾಥ ಅವರಿಂದ ಸಮಂಜಸ ಮಾಹಿತಿ ಸಿಕ್ಕಿಲ್ಲ ಮತ್ತು ದಾಖಲಾತಿ ನೀಡಿಲ್ಲ. ಈ ಔಷಧಗಳು ದಾಸ್ತಾನು ರಿಜಿಸ್ಟ್ರರ್‌ನಲ್ಲೂ ದಾಖಲಾಗಿಲ್ಲ. ಅಲ್ಲದೆ, ಅಲ್ಲಿದ್ದ ಔಷಧಗಳ ಮೇಲೆ ಮಾರಾಟಕ್ಕಿಲ್ಲ (ನಾಟ್ ಫಾರ್ ಸೇಲ್)ಎಂದು ನಮೂದಾಗಿಲ್ಲ ಎಂಬುದು ದೃಢಪಟ್ಟಿದೆ.
ಎಲ್ಲ ಔಷಧಗಳ ಮೇಲೆ ಎಂಆರ್‌ಪಿ ನಮೂದು ಇದ್ದು, ಇದು ಕಾನೂನು ಬಾಹಿರವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಆಸ್ಪತ್ರೆಯ ಫಾರ್ಮಸಿಸ್ಟ್‌ಗಳು ಸಮಂಜಸವಾದ ಉತ್ತರ ನೀಡಿದ ಕಾರಣ ದಾಖಲಾತಿ ಸಂಗ್ರಹಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಲೋಕಾಯುಕ್ತ ಇನ್‌ಸ್ಪೆಕ್ಟರ್ ಕೆ.ಪಿ.ರುದ್ರೇಶ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.