

ಮಂಗಳೂರು: ಮನೆ ಕಟ್ಟಲು ಕಟ್ಟಡ ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು 50 ಸಾವಿರ ರೂ. ಲಂಚ ಪಡೆಯುತ್ತಿದ್ದ ಮಂಗಳೂರು ಗಣಿ ಇಲಾಖೆ ಕಛೇರಿಗೆ ತೆರಳಿದ್ದು, ಅಲ್ಲಿನ ಉಪನಿರ್ದೇಶಕರಾದ ಕೃಷ್ಣವೇಣಿ, ಸಿಬ್ಬಂದಿಗಳಾದ ಪ್ರದೀಪ್ ಹಾಗೂ ಮಧು ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಉಳ್ಳಾಲ ತಾಲೂಕು ಇರಾ ಗ್ರಾಮದ ಸರ್ವೆ ನಂಬ್ರ 279/5 ರಲ್ಲಿ 1.39 ಎಕರೆ ವಿಸ್ತೀರ್ಣದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆಯನ್ನು ಕಟ್ಟುವ ಉದ್ದೇಶದಿಂದ ಕಟ್ಟಡಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 2024 ಅಕ್ಟೋಬರ್ 28ರಂದು ಅರ್ಜಿ ಸಲ್ಲಿಸಿದ್ದರು. ಸಮತಟ್ಟು ಮಾಡುವ ಸಲುವಾಗಿ ಜಮೀನಿನಲ್ಲಿ ಲಭ್ಯವಿರುವ ಕಟ್ಟಡಕಲ್ಲು ತೆಗೆಯಲು ಪ್ರಮಾಣಪತ್ರ/ದೃಢಿಕರಣ ಪತ್ರ ನೀಡಬಹುದಾಗಿದೆ ಎಂದು ಉಳ್ಳಾಲ ತಾಲೂಕು ತಹಶೀಲ್ದಾರ್ ಅವರು 2025 ಮಾ.21ರಂದು ವರದಿ ಸಲ್ಲಿಸಿದ್ದರೂ ಕೂಡ ಗಣಿ ಇಲಾಖೆಯಿಂದ ಅನುಮತಿ ನೀಡಿರಲಿಲ್ಲ.
ಈ ಬಗ್ಗೆ ಅರ್ಜಿಯ ಬಗ್ಗೆ ವಿಚಾರಿಸಲು ದೂರುದಾರರು ಮಂಗಳೂರು ಗಣಿ ಇಲಾಖೆ ಕಛೇರಿಗೆ ತೆರಳಿದ್ದು, ಅಲ್ಲಿನ ಉಪನಿರ್ದೇಶಕಿ ಕೃಷ್ಣವೇಣಿ ಅವರು ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಯಿಸಿ ಫೈಲ್‌ಗೆ 50,000 ರೂ. ತಗೊಳ್ಳಿ, ನಂತರ ಸೈನ್ ಮಾಡುವ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ರವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ದೂರುದಾರರಿಂದ ಕೃಷ್ಣವೇಣಿ ಅವರಿ ಚಾಲಕ ಮಧು ಅವರ ಮೂಲಕ 50,000 ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತ ಮಂಗಳೂರು ವಿಭಾಗ ಪ್ರಭಾರ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಅವರು ಹಾಗೂ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣಿಯ ಪೊಲೀಸ್ ನಿರೀಕ್ಷಕ ಮಂಜುನಾಥ, ರಾಜೇಂದ್ರ ನಾಯ್ಕ ಅವರು ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು.