

ಕಾರವಾರ: ಬೆಡ್ ಶೀಟ್ ಪೂರೈಕೆಯ ಬಿಲ್ ಪಾವತಿಗೆ ಲಂಚ ಪಡೆಯುತ್ತಿದ್ದ ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಅಂಕೋಲಾದ ಮೌಸಿನ್ ಅಮಹದ್ ಶೇಖ್ ಎಂಬ ಗುತ್ತಿಗೆದಾರ ಕ್ರಿಮ್ಸ್ ಆಸ್ಪತ್ರೆಗೆ 2024 ರಲ್ಲಿ 3.34 ಲಕ್ಷ ರೂ. ಮೊತ್ತದ ಬೆಡ್ ಶೀಟ್‌ಗಳನ್ನು ಗುತ್ತಿಗೆ ಪಡೆದು ಪೂರೈಕೆ ಮಾಡಿದ್ದರು. ಆದರೆ, ವರ್ಷ ಕಳೆದರೂ ಬಿಲ್ ಪಾವತಿಯಾಗಿರಲಿಲ್ಲ. ಬಿಲ್ ಪಾಸ್ ಮಾಡಲು ಕುಡ್ತರಕರ್ 50 ಸಾವಿರ ರೂ. ಲಂಚ ಕೇಳಿದ್ದರು ಎನ್ನಲಾಗಿದೆ. 20 ಸಾವಿರ ರೂ.ಗಳನ್ನು ಮೌಸಿನ್ ಒಂದು ದಿನದ ಹಿಂದೆ ನೀಡಿದ್ದರು. ಇನ್ನೂ 30 ಸಾವಿರ ರೂ.ಗಳನ್ನು ನೀಡುವ ಸಂದರ್ಭದಲ್ಲಿ ಅವರ ಚೇಂಬರ್‌ನಲ್ಲಿಯೇ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಕುಮಾರ ಚಂದ್ರ ಹಾಗೂ ತಂಡ ದಾಳಿ ನಡೆಸಿತ್ತು. ಡಾ.ಶಿವಾನಂದ ಕುಡ್ತರಕರ್ ರನ್ನುಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಕುಡ್ತರಕರ್ ಅವರ ಮನೆ, ಕಚೇರಿಯ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ದಾಖಲೆಗಳನ್ನು ಕಲೆ ಹಾಕಿದ್ದಾರೆ. ಲಂಚದ ಸಂಬಂಧ ಕೆಲವು ಡೈರಿಗಳು, ವೈಸ್ ರೆಕಾರ್ಡ್ಗಳು ಸಿಕ್ಕಿದ್ದು, ಅವುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಎಸ್‌ಪಿ ಕುಮಾರ ಚಂದ್ರ ಮಾಹಿತಿ ನೀಡಿದ್ದಾರೆ.