ಜಡ್ಡುಗಟ್ಟಿದ ಅಧಿಕಾರಿಗಳಿಗೆ ‘ಲೋಕಾ’ ಕ್ಲಾಸ್: ಎಸಿ, ಎಡಿಎಲ್‌ಆರ್ ಕಚೇರಿಯಲ್ಲಿ ಕಡತ ಪರಿಶೀಲನೆ

Lokayukta police received complaints from people Mandya
Published on

ಪಾಂಡವಪುರ: ರೈತರು, ಸಾರ್ವಜನಿಕರ ಕೆಲಸ ಮಾಡಿಕೊಡಲು ಸುಖಾಸುಮ್ಮನೆ ಕಾಲಹರಣ ಮಾಡುತ್ತಿರುವ ಹಾಗೂ ಸಕಾರಣವಿಲ್ಲದೆ ಅಲೆದಾಡುತ್ತಿರುವ ಉಪವಿಭಾಗಾಧಿಕಾರಿ ಮತ್ತು ಎಡಿಎಲ್‌ಆರ್ ಕಚೇರಿಯ ಅಧಿಕಾರಿ, ಸಿಬ್ಬಂದಿಗೆ ಲೋಕಾಯುಕ್ತ ಡಿವೈಎಸ್ಪಿ ಸುನೀಲ್‌ಕುಮಾರ್ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಂತೆ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಸಾರ್ವಜನಿಕರು, ರೈತರು ಡಿವೈಎಸ್ಪಿ ಸುನೀಲ್‌ಕುಮಾರ್ ಎದುರು ಸಮಸ್ಯೆಗಳನ್ನು ಅನಾವರಣಗೊಳಿಸಿದರು. ಸಲ್ಲಿಕೆಯಾದ 38 ದೂರಿನ ಪೈಕಿ ಬಹುತೇಕ ಎಸಿ ಹಾಗೂ ಎಡಿಎಲ್‌ಆರ್ ಕಚೇರಿಗೆ ಸಂಬಂಧಿಸಿದವು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಬಳಿಕ ಎರಡು ಕಚೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.

ರೈತರ ದೂರುಗಳೇನು?: ಕಾರ್ಯಕ್ರಮಕ್ಕೆ ಆಗಮಿಸಿದ ರೈತರು ಲೋಕಾಯುಕ್ತ ಡಿವೈಎಸ್ಪಿ ಎದುರು ಅಳಲು ತೋಡಿಕೊಂಡರು. ಪ್ರಮುಖವಾಗಿ ಎಸಿ ಕಚೇರಿಯಲ್ಲಿ ದಾಖಲೆಗಳಿದ್ದರೂ ಕೆಲಸ ಮಾಡಿಕೊಡುವುದಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇತ್ಯರ್ಥಪಡಿಸುತ್ತಿಲ್ಲ. ಸಣ್ಣಪುಟ್ಟ ಕೆಲಸಕ್ಕೂ ಅಲೆದಾಡಿಸುತ್ತಾರೆ. ಕೆಲವರು ಲಂಚವಿಲ್ಲದೆ ಕಡತವನ್ನೇ ನೋಡುವುದಿಲ್ಲ. ಹೀಗಾದರೆ ನಾವು ಬದುಕುವುದಾರೂ ಹೇಗೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಕಳೆದರೂ ಸರ್ವೇ ಮಾಡಿಕೊಡುತ್ತಿಲ್ಲ. ಹಣ ಕೊಟ್ಟರೆ ಸಾಕು, ಸಿನಿಯಾರಿಟಿಯನ್ನು ನೋಡದೇ ಸರ್ವೇ ಮಾಡುತ್ತಾರೆ. ಮಾತ್ರವಲ್ಲದೆ ಸರ್ವೇ ಮಾಡುವಾಗಲೂ ತಾರತಮ್ಯ ತೋರಿಸುತ್ತಾರೆಂದು ಎಡಿಎಲ್‌ಆರ್ ಕಚೇರಿ ಅಧಿಕಾರಿ, ಸಿಬ್ಬಂದಿ ವಿರುದ್ಧ ದೂರು ನೀಡಿದರು.

ಕೆಲಸ ಮಾಡುವಂತೆ ತಾಕೀತು: ಸಾಕಷ್ಟು ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸುನೀಲ್‌ಕುಮಾರ್ ಅವರು ಎರಡು ಕಚೇರಿಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಕಡತ ಪರಿಶೀಲಿಸಿದಾಗ ಕಾರಣವಿಲ್ಲದೆ ಕೆಲಸ ಮಾಡಿಕೊಡಿರುವುದು ಕಂಡುಬಂದಿದೆ. ಮಾತ್ರವಲ್ಲದೆ ಇತ್ಯರ್ಥಪಡಿಸಬಹುದಾದ ಪ್ರಕರಣವನ್ನೂ ನಿರ್ಲಕ್ಷೃ ಮಾಡಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿ, ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಸುನೀಲ್‌ಕುಮಾರ್, ತ್ವರಿತವಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದರು.

ಲೋಕಾಯುಕ್ತ ಕಚೇರಿ ಸಿಬ್ಬಂದಿ ನಂದಿನಿ, ನಂದೀಶ್, ಮಹದೇವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net