

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಅಂಗನವಾಡಿ ಕಾರ್ಯಕರ್ತೆ ವರ್ಗಾವಣೆ ಮಾಡಲು 30 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೂಪರಿಂಡೆಂಟ್ ಹಾಗೂ ಕಂಪ್ಯೂಟರ್ ಆಪರೇಟರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಾಜಿ ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯ ಸೂಪರಿಂಡೆಂಟ್ ಅಬ್ದುಲ್ ವಲಿ, ಕಂಪ್ಯೂಟರ್ ಆಪರೇಟರ್ ಸೌಮ್ಯಾ ಬಡಿಗೇರ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ.
ಘಟನೆ ವಿವರ: ಹುಕ್ಕೇರಿ ತಾಲೂಕಿನ ಅಂಗನವಾಡಿ ಸಹಾಯಕಿ ಶಕುಂತಲಾ ಕಾಂಬಳೆ ಎಂಬುವವರು ವರ್ಗಾವಣೆಗೆ ಸೂಪರಿಂಡೆಂಟ್ ಅಬ್ದುಲ್ ವಲಿ 30 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದನು. ಹಣ ನೀಡದಿರುವ ಕಾರಣಕ್ಕೆ ವರ್ಗಾವಣೆ ತಡೆಹಿಡಿದ್ದನು. ಈ ಕುರಿತು ಶಕುಂತಲಾ ಕಾಂಬಳೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ 15 ಸಾವಿರ ರೂ. ಲಂಚದ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತರ ಬಲೆಗೆ ಇಬ್ಬರು ಬಿದ್ದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ದಾಳಿಗೆ ಹೆದರಿ ಕಂಪ್ಯೂಟರ್ ಆಪರೇಟರ್ ಸೌಮ್ಯ ಅಸ್ವಸ್ಥರಾಗಿದ್ದರು. ತಕ್ಷಣ ಕಚೇರಿಗೆ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದರು. ತದನಂತರ ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸಿದರು.
ನೇಮಕಾತಿಯಲ್ಲಿ ಅಕ್ರಮ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ, ತಾಲೂಕು ಮಟ್ಟದ ಕಚೇರಿ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಲಕ್ಷಾಂತರ ರೂ. ಹಣಕಾಸಿನ ವ್ಯವಹಾರ ನಡೆಸಿದ್ದಾರೆ. ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ 50 ಸಾವಿರ ರೂ. ವರೆಗೆ ಹಣ ಪಡೆದುಕೊಂಡಿದ್ದಾರೆ. ಹಣ ನೀಡದಿರುವವರನ್ನು ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿದೆ. ಅಂಗನಾವಡಿ ಕಾರ್ಯಕರ್ತೆಯರ ವರ್ಗಾವಣೆ, ಅಂಗನವಾಡಿಗಳಿಗೆ ಆಹಾರ ಪೂರೈಕೆಯಲ್ಲಿ ಲಕ್ಷಾಂತರ ರೂ. ಅಕ್ರಮ ವ್ಯವಹಾರ ನಡೆಯುತ್ತಿದೆ. ಮಾಸಿಕ 1ರಿಂದ 2 ಲಕ್ಷ ರೂ. ಅಧಿಕಾರಿಗಳು ಕಮಿಷನ್, ಲಂಚದ ಮೂಲಕ ಹಣ ಸ್ವೀಕರಿಸುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರು ದೂರಿದ್ದಾರೆ.