

ನರಗುಂದ: ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಧಾರವಾಡದ ಕೆಐಎಡಿಬಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋವಿಂದಪ್ಪ ಹನುಮಂತಪ್ಪ ಭಜಂತ್ರಿ ಅವರ ನರಗುಂದ ಪಟ್ಟಣದಲ್ಲಿರುವ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದರು.
ಧಾರವಾಡ ಲೋಕಾಯುಕ್ತ ಅಧಿಕಾರಿಗಳ ನಿರ್ದೇಶನದ ಮೇರೆಗೆ ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯಕುಮಾರ ಬಿರಾದಾರ ನೇತೃತ್ವದ 7 ಜನರ ಅಧಿಕಾರಿಗಳ ತಂಡ ನರಗುಂದದಲ್ಲಿ ಸೋಮವಾರ ರಾತ್ರಿಯೇ ಬೀಡುಬಿಟ್ಟಿದ್ದರು.
ಪಟ್ಟಣದ ಹೊರಕೇರಿ ಟಿಪ್ಪುಸುಲ್ತಾನ ಸರ್ಕಲ್ ಬಳಿಯಿರುವ ನಿವೃತ್ತ ಪ್ರಾಧ್ಯಾಪಕ ಹಾಗೂ ಧಾರವಾಡದ ಕೆಐಎಡಿಬಿ ಸಹಾಯಕ ಕಾರ್ಯನಿರ್ವಾಹಕ ಗೋವಿಂದಪ್ಪ ಭಜಂತ್ರಿ ಅವರ ಸಂಬಂದಿ ಎಸ್.ಬಿ. ಭಜಂತ್ರಿಯವರ ಮನೆಯ ಮೇಲೆ ಮಂಗಳವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಏಕಾಏಕಿ ದಾಳಿ ನಡೆಸಿದರು.
ಇನ್ನೂ ನಿದ್ರೆ ಮಂಪರಿನಲ್ಲಿದ್ದ ಕುಟುಂಬಸ್ಥರು ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಮೈಕೊರೆಯುವ ಚಳಿಯಲ್ಲಿಯೂ ಕ್ಷಣಕಾಲ ಬೆವರುವಂತೆ ಮಾಡಿತ್ತು. ಮನೆಯಲ್ಲಿದ್ದ ಲಕ್ಷಾಂತರ ರೂ. ನಗದು, ಬೆಳ್ಳಿ, ಬಂಗಾರದ ಆಭರಣ, ಜಮೀನು, ಮನೆ, ಪ್ಲಾಟ್ ಮುಂತಾದವುಗಳ ದಾಖಲಾತಿಗಳನ್ನು ಅಧಿಕಾರಿಗಳು ದಿನವಿಡೀ ಪರಿಶೀಲಿಸಿದರು.
ಎಸ್.ಬಿ. ಭಜಂತ್ರಿ ಮನೆಯಲ್ಲಿದ್ದ ತಿಜೋರಿಯೊಂದರ ಕೀಲಿಕೈ ಸಿಗದಿದ್ದಾಗ ಹೊಸ ಬೀಗ ಮಾಡಿಸಿ ಬಾಗಿಲು ತೆರೆದು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಲೋಕಾಯುಕ್ತ ಸಿಬ್ಬಂದಿ ಅಯ್ಯನಗೌಡ್ರ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.
ನರಗುಂದದಲ್ಲಿ ದಾಳಿ ಯಾಕೆ?: ಧಾರವಾಡದ ಕೆಐಎಡಿಬಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋವಿಂದಪ್ಪ ಭಜಂತ್ರಿ ಮೂಲತ: ಬದಾಮಿ ತಾಲೂಕಿನ ಚೊಳಚಗುಡ್ಡದ ನಿವಾಸಿ. ಸವದತ್ತಿ ತಾಲೂಕು ಉಗರಗೋಳದ ಇವರ ಪತ್ನಿಯ ಹಿರಿಯ ಸಹೋದರಿಯನ್ನು ನರಗುಂದದ ಎಸ್.ಬಿ.ಭಜಂತ್ರಿ ಅವರಿಗೆ ಸುಮಾರು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರಿಂದ ಇವರಿಬ್ಬರು ಪರಸ್ಪರ ಸಂಬಂಧಿಕರಾಗಿದ್ದಾರೆ. ಬಾಗಲಕೋಟೆ, ಬಾದಾಮಿ, ಸವಣೂರಿನಲ್ಲಿ ಸೇವೆ ಸಲ್ಲಿಸಿದ್ದ ಗೋವಿಂದಪ್ಪ 2003 ರಿಂದ ಧಾರವಾಡದ ಕೆಐಎಡಿಬಿ ಇಲಾಖೆಯಲ್ಲಿ ಎಇಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿ ಬಂದಿರುವುದರಿಂದ ಧಾರವಾಡದಲ್ಲಿರುವ ಎರಡು ಮನೆ, ಕಚೇರಿ, ಉಗರಗೋಳದಲ್ಲಿರುವ ಬೀಗರ ಮನೆ, ತೋಟದ ಮನೆ ಹಾಗೂ ನರಗುಂದದ ಇವರ ಸಂಬಂಧಿಕರ ಮನೆ ಸೇರಿ ಒಟ್ಟು 6 ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಡಿವೈಎಸ್ಪಿ ವಿಜಯಕುಮಾರ ಬಿರಾದಾರ ತಿಳಿಸಿದರು.