ಸರ್ಕಾರಿ ಆಸ್ಪತ್ರೆ ಸ್ಥಿತಿ ಶೋಚನೀಯ

6manju3a
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಬಡವರಿಗೆ ಉಚಿತ ಹಾಗೂ ಉತ್ತಮ ಆರೋಗ್ಯ ಸೇವೆ ನೀಡುವಂತಹ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿವೆ. ರೋಗಿಗಳಿಗೆ ನಿಗದಿತ ಸಮಯದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಕಳವಳ ವ್ಯಕ್ತಪಡಿಸಿದರು.

ನಗರದ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ, ಲೋಕಾಯುಕ್ತ ಪ್ರಕರಣಗಳ ವಿಲೇವಾರಿ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಸಾಕಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಸರಿಯಾಗಿಲ್ಲ. ಆದರೂ ಬೆರಳಣಿಕೆಯಷ್ಟು ಆಸ್ಪತ್ರೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ, ಸಿಬ್ಬಂದಿ ವಿವರ, ಔಷಧಗಳ ದಾಸ್ತಾನು ಮಾಹಿತಿ ಒದಗಿಸಲು ಸೂಚಿಸಿದರು.

ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ಮಾದರಿ, ಭ್ರಷ್ಟಾಚಾರ ಮುಕ್ತಗೊಳಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ನಗರ, ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯ ಮಾರಾಟಗಾರ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮ ವಹಿಸಬೇಕು. ನಿರ್ಲಕ್ಷೃ ವಹಿಸುತ್ತಿರುವುದು ಸರಿಯಲ್ಲ ಎಂದರು.

ಸರ್ಕಾರಗಳು ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆ ರೂಪಿಸಿ ಸಾಕಷ್ಟು ಅನುದಾನ ಒದಗಿಸುತ್ತಿದ್ದು, ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಒಂದು ವೇಳೆ ಅಧಿಕಾರಿಗಳು, ಸಿಬ್ಬಂದಿ ಭ್ರಷ್ಟಾಚಾರ ನಡೆಸಿದರೆ ಶಿಸ್ತುಕ್ರಮ ವಹಿಸಲಾಗುವುದು ಎಂದರು.

ಸರ್ಕಾರ ನೌಕರರಿಗೆ ಅನೇಕ ಸವಲತ್ತು ನೀಡುತ್ತಿದ್ದು, ಉತ್ತಮ ಜೀವನ ಸಾಗಿಸಬಹುದಾಗಿದೆ. ಆದರೆ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗುತ್ತಿರುವ ಕುರಿತು ದೂರಗಳು ಬಂದಿದ್ದು, ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು. ಪ್ರತಿ ಅಧಿಕಾರಿ, ಸಿಬ್ಬಂದಿಗೆ ಅವರದೇ ಆದ ಕಾರ್ಯಗಳನ್ನು ವರ್ಗೀಕರಣ ಮಾಡಿ ಕೊಡಲಾಗಿರುತ್ತದೆ. ಈ ಕಾರ್ಯ ಪರೀಶಿಲನೆಗಾಗಿ ಮೇಲುಸ್ತುವಾರಿಯನ್ನು ನೇಮಿಸಿದ್ದರೂ ಸಹ ಸರ್ಕಾರಿ ಕಾರ್ಯಗಳು ಸುಗಮವಾಗಿ ಸಾಗುತ್ತಿಲ್ಲ. ಒಬ್ಬ ವ್ಯಕ್ತಿ ಒಂದೇ ಕೆಲಸಕ್ಕಾಗಿ ಪದೇ ಪದೆ ಕಚೇರಿಗೆ ಆಗಮಿಸುತ್ತಾನೆ ಎಂದರೆ ಕಚೇರಿಯಲ್ಲಿ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ ಎಂದರ್ಥ ಎಂದು ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕ ಸೇವೆಯಲ್ಲಿರುವ ಪ್ರತಿಯೊಬ್ಬರೂ ಲೋಕಾಯುಕ್ತ ಕಾಯ್ದೆ ಬಗ್ಗೆ ಅರಿವು ಹೊಂದಿರಬೇಕು. ತಪ್ಪು ಸಣ್ಣದಾಗಿರಲಿ, ದೊಡ್ಡದಾಗಿರಲಿ ಈ ಕಾಯ್ದೆಯಡಿ ಶಿಕ್ಷೆ ಖಚಿತ ಎಂದು ಎಚ್ಚರಿಸಿದರು.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆ ಪರಿಶೀಲನೆ:ಬೆಳಗಾವಿ ನಗರದ ಸಬ್‌ರಜಿಸ್ಟ್ರಾರ್ ಕಚೇರಿಗೆ ಬುಧವಾರ ಬೆಳಗ್ಗೆ ದಿಢೀರ್ ಲೋಕಾಯುಕ್ತ ನ್ಯಾಯವಾದಿ ಶುಭವೀರ ಜೈನ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು. ಸಾರ್ವಜನಿಕರ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮಾಡಿಕೊಡಬೇಕು. ಕಚೇರಿಗೆ ಜನರು ಅಲೆದಾಡದಂತೆ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ ಶಿಂಧೆ, ಪೊಲೀಸ್ ಆಯುಕ್ತ ಬೋರಸೆ ಭೂಷಣ ಗುಲಾಬರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net