

ಶಿರಹಟ್ಟಿ: ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯಕುಮಾರ ಬಿರಾದಾರ ನೇತೃತ್ವದ ತಂಡ ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ದಿನವಿಡೀ ಪರಿಶೀಲನೆ ನಡೆಸಿತು. ನಿಯಮಬಾಹಿರವಾಗಿ ಕೆಲಸಗಳು ಕಂಡುಬಂದರೆ ನೌಕರರಿಗೆ ಕುತ್ತು ಬರಲಿದೆ ಎಂದು ತಹಸೀಲ್ದಾರ್ ಹಾಗೂ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಕಚೇರಿಯಲ್ಲಿನ ನಿರ್ವಹಣೆ ಕೊರತೆ, ಅರ್ಜಿ ವಿಲೇವಾರಿ ವಿಳಂಬ ಹಾಗೂ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅನೇಕರಿಂದ ದೂರುಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಈ ಭೇಟಿ ಮಹತ್ವ ಪಡೆದಕೊಂಡಿತ್ತು.
ಡಿವೈಎಸ್ಪಿ ಪರಮೇಶ ಕವಟಗಿ ಹಾಗೂ ಸಿಬ್ಬಂದಿ ಜತೆ ಕಚೇರಿಗೆ ಆಗಮಿಸಿದ ಬಿರಾದಾರ ಅವರು, ಮೊದಲಿಗೆ ರೆಕಾರ್ಡ್ ರೂಂ ಮತ್ತು ಸಾಮಾಜಿಕ ಭದ್ರತೆ ವಿಭಾಗಗಳ ಪರಿಶೀಲನೆ ನಡೆಸಿದರು. ರೈತರಿಗೆ ದಾಖಲೆ ನೀಡುವಲ್ಲಿ ಹಣದ ಬೇಡಿಕೆ ಇರುತ್ತದೆ ಎಂಬ ಆರೋಪದ ಬಗ್ಗೆ ಸ್ಪಷ್ಟ ಸೂಚನೆ ನೀಡಿ, ಚಲನ್ ಮೂಲಕ ಮಾತ್ರ ಪಾವತಿ ಇರಬೇಕು. ನಗದು ಬೇಡಿಕೆ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಟಲ್ ಜನಸ್ನೇಹಿ ಕೇಂದ್ರದ ಪರಿಶೀಲನೆ ವೇಳೆ ರೈತರಿಗೆ ನೀಡಿದ ಬೆಳೆ ದೃಢೀಕರಣ ಪತ್ರಗಳಲ್ಲಿ ದೋಷಗಳು ಕಾಣಿಸಿಕೊಂಡವು. ಒಂದೇ ಫೋಟೋ ಹಲವು ಅರ್ಜಿಗಳಿಗೆ ಲಗತ್ತಿಸಿದ ವಿಷಯ ಬಹಿರಂಗವಾಯಿತು. ಇದರಿಂದ ನೈಜ ರೈತರಿಗೆ ಅನ್ಯಾಯವಾಗಬಾರದು. ಸೂಕ್ತ ದಾಖಲೆ ಇಲ್ಲದೆ ಪ್ರಮಾಣಪತ್ರ ನೀಡದಂತೆ ಬಿರಾದಾರ ತಾಕೀತು ಮಾಡಿದರು.
ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ ಸೇರಿದಂತೆ ವಿವಿಧ ಅರ್ಜಿಗಳ ಪರಿಶೀಲನೆಯ ಸಂದರ್ಭದಲ್ಲಿ, ಅರ್ಹತೆಯುಳ್ಳ ಅರ್ಜಿಗಳನ್ನು ಅನಾವಶ್ಯಕವಾಗಿ ರದ್ದುಪಡಿಸಿರುವುದು ಬೆಳಕಿಗೆ ಬಂದಿತು. ಗ್ರಾಮ ಲೆಕ್ಕಾಧಿಕಾರಿಗಳ ದೃಢೀಕರಣವಿಲ್ಲದೆ ಕಂದಾಯ ನಿರೀಕ್ಷಕರು ಅರ್ಜಿಗಳನ್ನು ತಿರಸ್ಕರಿಸುತ್ತಿರುವ ಬಗ್ಗೆ ಪ್ರಶ್ನೆ ಎತ್ತಿ, ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕ್ರಮ ವಹಿಸದಿರುವುದೇಕೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜೆ-ಫಾರ್ಮ್‌ಗೆ ಸಂಬಂಧಿಸಿದ ನೋಟಿಸ್ ಜಾರಿಮಾಡದೆ ನೇರವಾಗಿ ಕ್ರಮ ತೆಗೆದುಕೊಳ್ಳುತ್ತಿರುವುದು ಗಂಭೀರ ಲೋಪ ಎಂದು ಬಿರಾದಾರ ಸ್ಪಷ್ಟಪಡಿಸಿದರು. ಸಂಬಂಧಪಟ್ಟ ಶಿರಸ್ತೇದಾರ್ ಮತ್ತು ಸಿಬ್ಬಂದಿಗೆ ಈ ವ್ಯವಹಾರ ತಿದ್ದುಕೊಳ್ಳುವ ಸೂಚನೆ ನೀಡಿದರು. ಅಭಿಲೇಖಾಲಯದಲ್ಲಿ ಸಾರ್ವಜನಿಕರ ಸೇವೆಗೆ ನಿಯೋಜನೆಯಾದ ಅನಧಿಕೃತ ಸಿಬ್ಬಂದಿಯ ಉಪಸ್ಥಿತಿ ಗಂಭೀರ ಚರ್ಚೆಗೆ ಕಾರಣವಾಯಿತು. ಅನಧಿಕೃತ ನೇಮಕಗಳಿಗೆ ಸ್ಥಳವಿಲ್ಲ. ವೇತನ ನೀಡುವ ಹಕ್ಕುದಾರರನ್ನೇ ಕೇಳಿ. ಸರ್ಕಾರದ ನಿಯಮಗಳನ್ನು ಮೀರಿ ಹೋದರೆ ನೌಕರಿಗೆ ಧಕ್ಕೆ ಎಂದು ಖಡಕ್ ಎಚ್ಚರಿಕೆ ನೀಡಿದರು.