

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಗ್ರಾಮಗಳಲ್ಲಿ ನಡೆಯುವ ಗ್ರಾಮಸಭೆಗಳಿಗೆ ಲೋಕಾಯುಕ್ತ ಅಧಿಕಾರಿಗಳನ್ನು ಆಹ್ವಾನಿಸಿದರೆ ಲೋಕಾಯುಕ್ತ ಇಲಾಖೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲು ಸಾಧ್ಯ. ಸಾರ್ವಜನಿಕರು ಲೋಕಾಯುಕ್ತಕ್ಕೆ ಅರ್ಜಿ ಎಲ್ಲಿ ಕೊಡಬೇಕು? ಹೇಗೆ ಕೊಡಬೇಕು? ಎನ್ನುವ ಬಗ್ಗೆ ಮಾಹಿತಿ ನೀಡಬಹುದು. ಆದರೆ ಈವರೆಗೆ ಯಾವುದೇ ಗ್ರಾಪಂಗಳು ಲೋಕಾಯುಕ್ತ ಅಧಿಕಾರಿಗಳನ್ನು ಗ್ರಾಮಸಭೆಗೆ ಆಹ್ವಾನಿಸಿಲ್ಲ ಎಂದು ಮಂಗಳೂರು ವಿಭಾಗ ಲೋಕಾಯುಕ್ತ ಅಧೀಕ್ಷಕ ಕುಮಾರ್ ಚಂದ್ರ ಹೇಳಿದರು.
ಲೋಕಾಯುಕ್ತ ಮಂಗಳೂರು ವಿಭಾಗದಿಂದ ಬಿ.ಸಿ.ರೋಡಿನ ತಾಪಂ ಸಭಾಂಗಣದಲ್ಲಿ ಸೋಮವಾರ ಸಾರ್ವಜನಿಕ ಅಹವಾಲು ಹಾಗೂ ಕುಂದುಕೊರತೆ ಸ್ವೀಕಾರ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದರು.
ಪ್ರಸ್ತುತ ದೂರು ನೀಡುವವರೇ ಮತ್ತೆ ಮತ್ತೆ ನೀಡುತ್ತಿದ್ದಾರೆ. ಇದು ಗ್ರಾಮೀಣ ಮಟ್ಟಕ್ಕೂ ವಿಸ್ತರಣೆಯಾಗಬೇಕು. ಸಾಮಾನ್ಯ ಜನರಿಗೂ ಲೋಕಾಯುಕ್ತದ ಬಗ್ಗೆ ಅರಿವು ಮೂಡಬೇಕು.ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಅವರ ಕೆಲಸದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ತಮ್ಮ ವ್ಯಾಪ್ತಿಗೆ ಸೇರದ ಕೆಲಸಗಳಿಗೆ ಅವರನ್ನು ಅಲೆದಾಡಿಸುವ ಬದಲು ಸರಿಯಾದ ಹಿಂಬರಹ ನೀಡಬೇಕು. ಬಾಕಿ ಉಳಿಸಿಕೊಂಡಿರುವ ಅರ್ಜಿಗಳ ಬಗ್ಗೆಯೂ ಸರಿಯಾದ ಹಿಂಬರಹ ನೀಡಬೇಕು ಎಂದರು.
21 ಅರ್ಜಿ ಸಲ್ಲಿಕೆ
ಬೆಳಗ್ಗೆ 11 ಗಂಟೆಗೆ ಆರಂಭವಾದ ಅಹವಾಲು ಸ್ವೀಕಾರ ಕಾರ್ಯಕ್ರಮ ಮಧ್ಯಾಹ್ನ 1.30ರವರೆಗೆ ನಡೆಯಿತು. ವಿವಿಧ ವಿಚಾರಗಳಿಗೆ ಸಂಬಂಧಿಸಿ 21 ದೂರು ಅರ್ಜಿಗಳು ಸಲ್ಲಿಕೆಯಾಯಿತು. ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ.ಭಟ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಲೋಕಾಯುಕ್ತ ಡಿವೈಎಸ್ಪಿಗಳಾದ ಡಾ.ಗಾನಾ ಪಿ.ಕುಮಾರ್, ಸುರೇಶ್ ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಚಂದ್ರಶೇಖರ್ ಕೆ.ಎನ್., ಭಾರತಿ ಜಿ., ಸಿಬ್ಬಂದಿ ಮಹೇಶ್, ರಾಜಪ್ಪ, ಗಂಗಣ್ಣ, ಸುರೇಂದ್ರ, ವೈಶಾಲಿ, ವಿವೇಕ್, ಪ್ರವೀಣ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಇನ್ನೂ ಸಿಕ್ಕಿಲ್ಲ ಪರಿಹಾರ ಮೊತ್ತ
ಕಳ್ಳಿಗೆ ಗ್ರಾಮದ ಬೆಟ್ಟು ಎಂಬಲ್ಲಿ 2 ವರ್ಷಗಳ ಹಿಂದೆ ಮಳೆಗೆ ಅವಿವಾಹಿತ ಯಮುನಾ ಅವರ ಮನೆ ಬಿದ್ದ ಪ್ರಕರಣ ಸಂಬಂಧಿಸಿ ಸರ್ಕಾರದ ವತಿಯಿಂದ ಪರಿಹಾರ ಮೊತ್ತ ಮಂಜೂರಾಗಿತ್ತು. ಅಂದಿನ ಕಂದಾಯಾಧಿಕಾರಿಗಳು ಹಾಗೂ ಪಂಚಾಯಿತಿ ಜನಪ್ರತಿನಿಧಿಗಳ ಸೂಚನೆಯಂತೆ ಅವರು ತಮ್ಮಲಿದ್ದ ಚಿನ್ನಾಭರಣ ಮಾರಿ ಹಾಗೂ ಸಹೋದರಿಯ ಮಗನ ಮೂಲಕ ಸಾಲ ಮಾಡಿಸಿ ಮನೆ ನಿರ್ಮಿಸಿದ್ದರು. ಆದರೆ ಮನೆ ನಿರ್ಮಾಣ ಬಳಿಕ ಸರ್ಕಾರದಿಂದ ಸಿಗಬೇಕಾದ ಪರಿಹಾರ ಮೊತ್ತ ಪಾವತಿಯಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತ ಗುತ್ತಿಗೆದಾರರು ಬಾಕಿ ಹಣ ಪಾವತಿಸುವಂತೆ ಸತಾಯಿಸುತ್ತಿದ್ದು, ಮಹಿಳೆ ತನಗೆ ಪರಿಹಾರ ಮೊತ್ತ ಒದಗಿಸಿಕೊಡುವಂತೆ ಲೋಕಾಯುಕ್ತ ಅಧಿಕಾರಿಗಳಲ್ಲಿ ಲಿಖಿತ ಮನವಿ ಮಾಡಿದರು.
ಅಕ್ರಮ ಗಣಿಗಾರಿಕೆಯಿಂದ ತೊಂದರೆ
ಬಿ.ಮೂಡ ಗ್ರಾಮದ ಕುವಡ್ಕ ಮನೆ ನಿವಾಸಿ ಸದಾನಂದ ಮೂಲ್ಯ ಅವರು ದೂರು ನೀಡಿ, ತನ್ನ ಮನೆ ಬಳಿ ಕಪ್ಪು ಕಲ್ಲು ಅಕ್ರಮ ಗಣಿಗಾರಿಕೆ ನಡೆಯುತಿದ್ದು, ಸ್ಫೋಟಕಗಳಿಂದ ಮನೆಗೆ ಅಪಾಯ ಉಂಟಾಗಿದೆ. ಸ್ವಲ್ಪ ಸಮಯ ನಿಂತಿದ್ದ ಗಣಿಗಾರಿಕೆ ಮತ್ತೆ ಆರಂಭಗೊಂಡಿದ್ದು, ಗಣಿಗಾರಿಕೆ ಮಣ್ಣನ್ನು ತನ್ನ ಮನೆ ಬಳಿ ಶೇಖರಿಸಿರುವುದರಿದರಿಂದ ನಿನ್ನೆಯ ಮಳೆಗೆ ಮಣ್ಣೆಲ್ಲಾ ಮನೆ ಪರಿಸರದಲ್ಲಿ ಹರಡಿ ನಡೆದಾಡಲೂ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ಬಿಲ್ ಪಾವತಿಸದ ಪಿಡಿಒ!
ಸಜೀಪಮುನ್ನೂರು ಗ್ರಾಪಂ ಸದಸ್ಯ ಸಂದೀಪ್ ಕುಮಾರ್ ದೂರು ಸಲ್ಲಿಸಿ, 2020ರಿಂದ 2023ರವರೆಗೆ ನಡೆದ ಕಾಮಗಾರಿಯ ಬಿಲ್ ಮೊತ್ತ 28 ಲಕ್ಷ ರೂಪಾಯಿಯನ್ನು ಪಂಂಚಾಯಿತಿ ನಿರ್ಣಯ, ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ನಿರ್ದೇಶನ ನೀಡಿದರೂ ಪಿಡಿಒ ಬಿಲ್ ಪಾವತಿಸುತ್ತಿಲ್ಲ ಎಂದು ದೂರಿದರು.
ವಿವಿಧ ಸಮಸ್ಯೆ ವಿರುದ್ಧ ದೂರು
ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರಿಗೆ ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ವರತೆ ಪ್ರದೇಶಕ್ಕೂ ನ್ಯಾಯೋಚಿತ ಪರಿಹಾರ ನೀಡದಿರುವ ಬಗ್ಗೆ, ಸಜೀಪಮುನ್ನೂರು ಗ್ರಾಮದಲ್ಲಿ ಸ್ಮಶಾನ ನಿರ್ಮಾಣಕ್ಕೆ ಸರ್ಕಾರ ಎರಡು ಸ್ಥಳಗಳನ್ನು ಮಂಜೂರು ಮಾಡಿದ್ದರೂ ಇನ್ನೂ ಸ್ಮಶಾನ ನಿರ್ಮಾಣ ಆಗದಿರುವ ಬಗ್ಗೆ, ಮೆಲ್ಕಾರ್ ದೆಂಜಿಪಾಡಿ ರಾಜಕಾಲುವೆ ಒತ್ತುವರಿಯಿಂದ ನೇತ್ರಾವತಿ ನದಿಗೆ ಸಂಪರ್ಕಿಸುವ ಕಾಲುವೆಯಲ್ಲಿ ಹೂಳು ತುಂಬಿ ನರಿಕೊಂಬು ಗ್ರಾಮದ ನಾಯಿಲ ಪ್ರದೇಶದಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ದೂರು ಸಲ್ಲಿಸಿದರು. ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖೆಯ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಸತಿ ನಿಲಯ ಇನ್ನೂ ನಿರ್ಮಾಣಗೊಂಡಿರದ ಬಗ್ಗೆ ವಿಶ್ವನಾಥ ಚೆಂಡ್ತಿಮಾರ್, ಕರಿಯಂಗಳ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ರಸ್ತೆ ಅತಿಕ್ರಮಣ ಮಾಡಿ ಮನೆ ನಿರ್ಮಿಸಿದವರಿಗೂ 9/11 ನೀಡಿರುವ ಪಿಡಿ ವಿರುದ್ಧ ರಘುನಾಥ, ಜಮೀನು ಅತಿಕ್ರಮಣದ ಬಗ್ಗೆ ಪಾಂಡುರಂಗ ನಾಯಕ್ ಹಾಗೂ ಸರ್ಕಾರದ ಸಾಫ್ಟ್‌ವೇರ್ ಸಮಸ್ಯೆಯಿಂದ ಆರ್‌ಟಿಸಿಯಲ್ಲಿ ವ್ಯತ್ಯಾಸ ಆಗಿ ತೊಂದರೆ ಆಗುತ್ತಿರುವ ಬಗ್ಗೆ ವಿನ್ಸೆಂಟ್ ತಾವ್ರೋ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.