ಲೋಕಾಯುಕ್ತ ಪೊಲೀಸರಿಂದ ಕುಂದುಕೊರತೆ ಸಭೆ

21-KGL-3,,, (
Published on

ಕೊಳ್ಳೇಗಾಲ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷ ಜಿ.ಎಸ್.ಗಜೇಂದ್ರ ಪ್ರಸಾದ್ ಸಾರ್ವಜನಿಕರ ಕುಂದುಕೊರತೆ ದೂರು ಅರ್ಜಿಯನ್ನು ಸ್ವೀಕರಿಸಿದರು.

ದೂರು ಅರ್ಜಿ ಸ್ವೀಕಾರ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಸಾರ್ವಜನಕರಿಂದ 6 ಅರ್ಜಿಗಳು ಸ್ವೀಕಾರಗೊಂಡವು.

ರೈತ ಮುಖಂಡ ರಂಗಸ್ವಾಮಿ, ಎಲ್.ಶಾಂತಮ್ಮ, ಮುನಿಯಮ್ಮ ಎಂಬುವರು ಮುಡಿಗುಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2021-22ನೇ ಸಾಲಿನಲ್ಲಿ 20ಕ್ಕೂ ಹೆಚ್ಚು ಜನರು ಲಕ್ಷಾಂತರ ರೂ.ಗಳನ್ನು ವರ್ಷದ ಮಟ್ಟಿಗೆ ಕಾಯಂ ಠೇವಣಿಯನ್ನು ಇಟ್ಟಿದ್ದಾರೆ. ಅವಧಿ ಮುಗಿದು 3 ವರ್ಷಗಳಾದರೂ ಅಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮು ನಮಗೆ ಠೇವಣಿ ಹಣ ಮತ್ತು ಬಡ್ಡಿ ನೀಡುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗುತ್ತಿಲ್ಲ. ಹಾಗಾಗಿ, ನಮ್ಮ ಸಮಸ್ಯೆಗೆ ಪರಿಹಾರ ಕೊಡಿಸಬೇಕು ಹಾಗೂ ಕಾನೂನು ಕ್ರಮವಹಿಸಬೇಕು ಎಂದು ಒತ್ತಾಯಿಸಿ ದೂರು ಅರ್ಜಿ ನೀಡಿದರು.

ರೈತ ಮುಖಂಡ ರಾಮಕೃಷ್ಣ ಅವರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ ಒತ್ತುವರಿ ತೆರವು ಮಾಡದೇ ಒತ್ತುವರಿದಾರರೊಂದಿಗೆ ನಗರಸಭೆ ಪೌರಯುಕ್ತರು ಶಾಮೀಲಾಗಿದ್ದಾರೆ. ಆದ್ದರಿಂದ ಒತ್ತುವರಿಗೆ ತೆರವಿಗೆ ಸೂಚನೆ ನೀಡುವಂತೆ ದೂರು ಸಲ್ಲಿಸಿದರು.

ಅಂತೆಯೇ ನಗರಸಭೆ ಅಧಿಕಾರಿಗಳು ಇ-ಸ್ವತ್ತು ನೀಡದಿರುವುದು, ನಗರ ಸಭೆಯಲ್ಲಿ ಕೆಲಸ ನಿರ್ವಹಿಸುವ ನೌಕರರೊಬ್ಬರು ಕೇಬಲ್ ಅಪರೇಟರ್ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ದೂರು ನೀಡಿದ್ದರು.

ಬಳಿಕ ಡಿವೈಎಸ್ಪಿ ಜಿ.ಎಸ್.ಗಜೇಂದ್ರ ಪ್ರಸಾದ್ ಮಾತನಾಡಿ, ದೂರು ಅರ್ಜಿಗಳಿಗೆ ಸಂಬಂಧಿದಂತೆ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಿ ದೂರುದಾರಿಗೆ ನ್ಯಾಯ ಒದಗಿಸುವಂತೆ ಸೂಚಿಸಿದರು.

ಮೂಲ ಅಳತೆಯಂತೆ ಗಡಿ ನಿರ್ಧರಿಸಿ:ಪಟ್ಟಣದ ಡಾ.ರಾಜ್‌ಕುಮಾರ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ ವಿಸ್ತೀರ್ಣ ವಿಚಾರವಾಗಿ ರೈತ ಮುಖಂಡ ದಶರಥ್ ಮಾತನಾಡಿ, ಈ ಎರಡು ರಸ್ತೆಯನ್ನು ನಗರಸಭೆ ಅಧಿಕಾರಿಗಳು ಮೂಲ ಅಳತೆಯಂತೆ ಮೊದಲು ಗಡಿ ನಿರ್ಧರಿಸಬೇಕು. ಇದರಿಂದ ಸರ್ಕಾರಿ ಆಸ್ತಿಗಳು ಒತ್ತುವರಿ ಆಗಿರುವುದು ತಿಳಿಯಲಿದೆ. ಅಲ್ಲದೆ, ಒತ್ತುವರಿದಾರರಿಗೆ ರಸ್ತೆ ವಿಸ್ತೀರ್ಣದ ವೇಳೆ ಅನ್ಯಾಯವಾಗಿ ಪರಿಹಾರ ನೀಡುವುದು ತಪ್ಪಲಿದೆ ಲೋಕಾಯುಕ್ತ ಡಿವೈಎಸ್ಪಿ ಅವರಿಗೆ ಮನವಿ ಮಾಡಿದ್ದಲ್ಲದೆ, ಪಟ್ಟಣದಲ್ಲಿ ಸರ್ಕಾರಿ ಆಸ್ತಿಗಳು ಒತ್ತುವರಿ ಆಗಿದೆ. ಸರ್ಕಾರಿ ಕಟ್ಟಡಗಳಿಗೆ ಇ-ಸ್ವತ್ತಿಲ್ಲ ಎಂದು ಮೌಖಿಕವಾಗಿ ದೂರಿದರು.

ಈ ಸಂಧರ್ಭದಲ್ಲಿ ಚಾಮರಾಜನಗರ ನಗರ ಲೋಕಾಯುಕ್ತ ಇನ್‌ಸ್ಪೆಪೆಕ್ಟರ್ ಎಂ.ಕೆ. ಲೋಹಿತ್ ಕುಮಾರ್, ಶಶಿಕುಮಾರ್, ಸಿಬ್ಬಂದಿ ಮಹಾಲಿಂಗಸ್ವಾಮಿ, ಶ್ರೀನಿವಾಸ್, ಗೌತಮ್, ಶಾಂತರಾಜು, ಕುಮಾರ ಆರಾಧ್ಯ, ಇಸಾಕ್, ನಾಗೇಂದ್ರ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net