

ಬಿಲ್ ಮೊತ್ತ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ l ಗುತ್ತಿಗೆದಾರ ಎಚ್.ಕರಿಬಸಪ್ಪ ದೂರು
ಹರಿಹರ: ನೀರು ಸರಬರಾಜು ಕಾಮಗಾರಿಗೆ ಸಂಬಂಧಿಸಿದಂತೆ ಪೂರೈಸಿದ್ದ ಸಾಮಗ್ರಿಗಳ ಬಿಲ್ ಮೊತ್ತವನ್ನು ಮಂಜೂರು ಮಾಡಲು ಕಮಿಷನ್ ರೂಪದಲ್ಲಿ ಲಂಚ ಪಡೆಯುವಾಗ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರ ಎಚ್.ಕರಿಬಸಪ್ಪ ಅವರು ಹರಿಹರ ನಗರಸಭೆಯ ವಾಟರ್ ಸಪ್ಲೈ ವಿಭಾಗಕ್ಕೆ ಅಂದಾಜು 25.30 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದು ಈ ಬಿಲ್ಲನ್ನು ಮಂಜೂರು ಮಾಡಲು ಪೌರಾಯುಕ್ತ ಐಗೂರು ಬಸವರಾಜ್ 2 ಲಕ್ಷ ರೂ.ಗಳನ್ನು ನೀಡುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ಎಚ್.ಕರಿಬಸಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಸೋಮವಾರ ಮಧ್ಯಾಹ್ನ ಹರಿಹರೇಶ್ವರ ಬಡಾವಣೆಯ ತಮ್ಮ ನಿವಾಸದಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ, ಇನ್ಸ್‌ಪೆಕ್ಟರ್‌ಗಳಾದ ಕಲಾವತಿ, ಎಚ್.ಎಸ್.ರಾಷ್ಟ್ರಪತಿ, ಪ್ರಭು ಬಿ.ಸೂರಿನ, ಮಧುಸೂದನ್ ಮತ್ತು ಸಿಬ್ಬಂದಿ ಇದ್ದರು.