ದ.ಕ. ಶೇ.77.44 ಮತದಾನ; ಬೆಳಗ್ಗಿನಿಂದಲೇ ಉತ್ಸಾಹದ ವಾತಾವರಣ

IMG-20240427-WA0001
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಬಿಸಿಲಿನ ಝಳ, ಅಧಿಕ ತಾಪಮಾನದ ನಡುವೆಯೂ ಲೋಕಸಭಾ ಚುನಾವಣೆಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಕ್ಷೇತ್ರದ ಮತದಾರರು ಎಂದಿನಂತೆ ಅತ್ಯುತ್ಸಾಹದಿಂದ ಭಾಗಿಯಾದರು. ದಕ್ಷಿಣ ಕನ್ನಡದಲ್ಲಿ ಶೇ.77.44 ಮತದಾನ ನಡೆದಿದೆ.

ಮತದಾನ ಶಾಂತಿಯುತವಾಗಿ ನಡೆದಿದೆ. ಕೆಲವು ಕಡೆಗಳಲ್ಲಿ ಮತಯಂತ್ರಗಳು ಕೈಕೊಟ್ಟ ಘಟನೆಗಳನ್ನು ಹೊರತುಪಡಿಸಿ ಯಾವುದೇ ಸಮಸ್ಯೆಗಳು ಎದುರಾಗಲಿಲ್ಲ. ಬೆಳಗಿನ ಜಾವ ಎಲ್ಲ ಕಡೆಗಳಲ್ಲಿ ಮತದಾರರು ದೊಡ್ಡ ಪ್ರಮಾಣದಲ್ಲಿ ಮತಗಟ್ಟೆಗಳಿಗೆ ಧಾವಿಸಿದ ಹಿನ್ನಲೆಯಲ್ಲಿ ಕೆಲವು ಕಡೆಗಳಲ್ಲಿ ಮತದಾನ ನಿಧಾನಗತಿಯಲ್ಲಿ ಸಾಗಿತ್ತು.
ಮತದಾನ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಆನುಸರಿಸಿ , ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು. ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಅಧಿಕ ಪ್ರಮಾಣದ ಮತದಾನ ದಾಖಲಾಗಿದೆ.
ಮತದಾನ ಆರಂಭದ ಹೊತ್ತಿನಲ್ಲೇ ಮಹಿಳಾ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿರುವುದು ಈ ಬಾರಿಯ ವಿಶೇಷತೆಯಾಗಿತ್ತು.
ಕಳೆದ ಅವಧಿಯ (2019) ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಶೇ.77.90 ಮತದಾನವಾಗಿತ್ತು. ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ  ಶೇ.   ಮಂದಿ ಮತ ಚಲಾಯಿಸಿದ್ದರು.
ಮತದಾನ ಸಂದರ್ಭ ಪ್ರತೀ ಎರಡು ಗಂಟೆಗೊಮ್ಮೆ ಚುನಾವಣಾ ಆಯೋಗ ಮತದಾನದ ಶೇಕಡಾವಾರು ಪ್ರಮಾಣ ಪ್ರಕಟಿಸಿದ್ದು, ಪ್ರತೀ ಬಾರಿ ದಕ್ಷಿಣ ಕನ್ನಡವೇ ಅತ್ಯಧಿಕ ಮತದಾನ ನಡೆದ ಹೆಗ್ಗಳಿಕೆಯನ್ನು ಹೊಂದಿತ್ತು.
ಸಂಜೆ 3 ಗಂಟೆಗೆ ದಕ್ಷಿಣ ಕನ್ನಡದಲ್ಲಿ 58.76 ಶೇ.ಮತದಾನ ನಡೆದಿದ್ದು, ಆ ಸಂದರ್ಭ ರಾಜ್ಯದಲ್ಲಿ ನಡೆದ ಸರಾಸರಿ ಮತದಾನದ ಶೇಕಡಾವಾರು ಮತದಾನದ ಪ್ರಮಾಣ ಶೇ.50 ಇತ್ತು. ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಮುಂಜಾನೆಯಿಂದಲೇ ಬಿರುಸಿನ ಮತದಾನ ಕಂಡುಬಂತು. ಸುಡುವ ಬಿಸಿಲು, ತಾಪಮಾನವನ್ನೂ ಲೆಕ್ಕಿಸದೆ, ಮತದಾರರು ಮತಗಟ್ಟೆಗೆ ಬರುತ್ತಿದ್ದರು. ಹಿರಿಯರು, ಅಂಗವಿಕಲರಿಗೆ ಮುಂಚಿತವಾಗಿ ಮನೆಯಿಂದಲೇ ಮತದಾನದ ಅವಕಾಶವಿದ್ದರೂ, 70 ದಾಟಿದ ಕೆಲವು ಹಿರಿಯರು ಮತಗಟ್ಟೆಗೆ ಆಗಮಿಸಿಯೇ ಮತ ಚಲಾಯಿಸಿ ಗಮನ ಸೆಳೆದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net