

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಘೋಷಣೆಗಳನ್ನು ಮೀರಿಸುವ ರೀತಿಯಲ್ಲಿ ಲೋಕಸಭಾ ಚುನಾವಣೆಗೂ ಮೊದಲು ಕೇಂದ್ರ ಸರ್ಕಾರವು ದೇಶದ ಹಿತವನ್ನು ಕಾಪಾಡುವ ದೊಡ್ಡ ಗ್ಯಾರಂಟಿಗಳನ್ನು ಕೊಡಲಿದೆ ಎಂದು ಶಾಸಕ ಬಸನಗೌಡ ಆರ್.ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯನ್ನು ಬಿಜೆಪಿ ಎದುರಿಸಲಿದೆ. ಕೇಂದ್ರದ ವಿಚಾರದಲ್ಲಿ ಒಂದು ರಾಷ್ಟ್ರ, ಒಬ್ಬ ನಾಯಕ ಎಂಬುದಾಗಿ ಜನರು ಹೇಳುತ್ತಿದ್ದಾರೆ. ಇದರಿಂದ ರಾಜ್ಯದ ಸಮಸ್ಯೆಗಳು ಯಾವುದೇ ಪ್ರಭಾವ ಬೀರುವುದಿಲ್ಲ ಎಂದರು.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಬಿಜೆಪಿಯು 25 ಸೀಟು ಗೆಲ್ಲಲಿದೆ. ಇದಕ್ಕೆ ಕೇಂದ್ರ ಸರ್ಕಾರವು ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವ ದೊಡ್ಡ ಗ್ಯಾರಂಟಿಗಳನ್ನು ನೀಡಲಿದೆ ಎಂದರು.
ಮೊದಲಿನಿಂದಲೂ ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದು ಪಕ್ಷದ ಟಿಕೆಟ್, ಸಚಿವ ಸ್ಥಾನ, ರಾಜ್ಯಾಧ್ಯಕ್ಷರ ಪಟ್ಟ ಸೇರಿದಂತೆ ಯಾವುದೇ ಹುದ್ದೆಗಳಿಗೆ ಲಾಭಿ ಮಾಡಿದನವಲ್ಲ. ಹಿರಿತನದ ಅರ್ಹತೆಯನ್ನು ಅಧರಿಸಿ, ಪಕ್ಷವೇ ಜವಾಬ್ದಾರಿ ನೀಡಲಿದೆ. ಇದಕ್ಕೆ ಯಾರ ಮೇಲೂ ಒತ್ತಡ ಹೇರುವುದಿಲ್ಲ ಎಂದರು.
ಬಿಜೆಪಿಗೆ ಯಾರೂ ಸಹ ಅನಿವಾರ್ಯವಲ್ಲ. ಹಿರಿಯ ನಾಯಕರ ಪ್ರಭಾವ ಎನ್ನುವುದು ಕೆಲವರ ಅಭಿಪ್ರಾಯ ಮಾತ್ರವಾಗಿದೆ. ಈಗಾಗಲೇ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿದ್ದು ಅವರ ಬಗ್ಗೆ ಚರ್ಚಿಸುವುದು ಬೇಡ ಎಂದರು.