

ಚಿಕ್ಕಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣಾ ಸಮರಕ್ಕೆ ಆಕಾಂಕ್ಷಿಗಳ ಪೈಪೋಟಿಯು ಈಗಲೇ ರಾಜಕೀಯ ಹೊಸ ಲೆಕ್ಕಾಚಾರಗಳ ಚರ್ಚೆಗೆ ಕಾರಣವಾಗಿದೆ.
ಹೌದು! ವಿಧಾನಸಭಾ ಅಗ್ನಿಪರೀಕ್ಷೆ ಮುಗಿಯುತ್ತಿದ್ದಂತೆ ಬಹುತೇಕ ಪಕ್ಷಗಳ ಚಿತ್ತವು ಮುಂಬರುವ ಸ್ಥಳೀಯ ಆಡಳಿತ ಸಂಸ್ಥೆಗಳು, ಲೋಕ ಚುನಾವಣೆಯತ್ತ ಹರಿದಿದೆ. ಹಾಗೆಯೇ ಪ್ರಭಾವಿ ಆಕಾಂಕ್ಷಿಗಳು ಸ್ವಪಕ್ಷೀಯ ಶಾಸಕರು, ನಾಯಕರು ಮತ್ತು ಬೆಂಬಲಿಗರ ಮೂಲಕ ಸಂಘಟನೆಗೆ ಸಜ್ಜಾಗುತ್ತಿದ್ದಾರೆ.
ಪ್ರಸ್ತುತ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಎಐಸಿಸಿ ಯುವ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಬೆಂಬಲಿಗರ ಟಿಕೆಟ್ ಪಡೆಯುವಿಕೆಯ ಗದ್ದಲ ಜೋರಾಗಿದೆ. ಆಕಾಂಕ್ಷಿಗಳು ಸಕಾರಾತ್ಮಕ ವಾತಾವರಣಕ್ಕೆ ಪೂರಕವಾದ ಆಂತರಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ, ನಾಯಕರ ಪರವಾಗಿ ಬ್ಯಾಟ್ ಬೀಸುವ ಕೆಲಸದಲ್ಲಿ ಮುಖಂಡರು ತೊಡಗಿದ್ದಾರೆ.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ ಕ್ಷೇತ್ರಗಳಲ್ಲಿ ಒಕ್ಕಲಿಗರನ್ನು ಕಣಕ್ಕಿಳಿಸಿ, ಚಿಕ್ಕಬಳ್ಳಾಪುರದಲ್ಲಿ ಬಲಿಜ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಡುವ ಲೆಕ್ಕಾಚಾರದಲ್ಲಿ ಲೋಕಸಭಾ ಚುನಾವಣೆಯ ತಂತ್ರಗಾರಿಕೆಯು ಅಡಗಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಮೊದಲು ಈ ಕ್ಷೇತ್ರದಲ್ಲಿ ಪ್ರಭಾವಿ ಡಾ ಕೆ.ಸುಧಾಕರ್‌ರನ್ನು ಸೋಲಿಸುವ ನಿಟ್ಟಿನಲ್ಲಿ ರಕ್ಷಾ ರಾಮಯ್ಯರನ್ನು ಕಣಕ್ಕಿಳಿಸಬೇಕೆಂಬ ಯೋಜನೆ ಇತ್ತು. ಆದರೆ, ಇದಾಗಲಿಲ್ಲ. ಬದಲಿಗೆ ಪ್ರದೀಪ್ ಈಶ್ವರ್ ಅಯ್ಯರ್‌ರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಹಾಗೆಯೇ ಗೆಲ್ಲಿಸಿಕೊಂಡು ಬರಲಾಯಿತು. ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಜಪಿಸುತ್ತಲೇ ಲೋಕಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಕಸರತ್ತು ನಡೆಸಲಾಗುತ್ತಿದೆ.
10 ವರ್ಷ ಜೋರಾಗಿ ಮಾತನಾಡುವ ಶಕ್ತಿ ಇದೆ. ಕ್ಷೇತ್ರದಲ್ಲಿ ಕಚೇರಿಯನ್ನು ಪ್ರಾರಂಭಿಸಿ, ಜನರ ಅಹವಾಲು ಆಲಿಸಲಾಗುವುದು. ಪಕ್ಷ ಸಂಘಟನೆಯನ್ನು ತೀವ್ರಗೊಳಿಸಲಾಗುವುದು ಎಂದು ನಗರದಲ್ಲಿ ಕೈಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. ಇದರೊಂದಿಗೆ ಮುಂಬರುವ ಲೋಕಸಭಾ ಚುನಾವಣೆಗೆ ನಾಲ್ಕನೇ ಸ್ಪರ್ಧೆಗೆ ಪರೋಕ್ಷವಾಗಿ ಒಲವು ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ 2009 ರಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ಮಾಜಿ ಸಚಿವ ಎಂ.ಆರ್.ಸೀತರಾಮ್ ಇಲ್ಲವೇ ಇವರ ಪುತ್ರ ರಕ್ಷಾ ರಾಮಯ್ಯ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬುದಾಗಿ ಕಾಂಗ್ರೆಸ್ ನಾಯಕರು ಪ್ರಚಾರ ಕೈಗೊಳ್ಳುತ್ತಿದ್ದಾರೆ.
ಬಾಕ್ಸ್
ಅಭಿಪ್ರಾಯ ಸಂಗ್ರಹ ಶುರು
ಈಗಾಗಲೇ ಮೊಯ್ಲಿ ಮತ್ತು ರಕ್ಷಾ ರಾಮಯ್ಯ ಬಣದ ಬೆಂಬಲಿಗರು ಲೋಕಸಭಾ ಚುನಾವಣೆಗೆ ಅಭಿಪ್ರಾಯ ಸಂಗ್ರಹವನ್ನು ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಾಯಕರಿಗೆ ಅವಕಾಶ ಸಿಗಬೇಕಾಗಿರುವುದರ ಅಗತ್ಯತೆಯ ಬಗ್ಗೆ ಪ್ರತಿಪಾದಿಸುತ್ತಿದ್ದಾರೆ. ಎರಡೂ ಕಡೆಯೂ ಪೈಪೋಟಿ ಜೋರಾಗಿದೆ. ಮುಂಬರುವ ದಿನಗಳಲ್ಲಿ ವರಿಷ್ಠರ ಹಂತದಲ್ಲಿ ಅಭ್ಯರ್ಥಿ ಆಯ್ಕೆಯ ತೀರ್ಮಾನ ಪ್ರಕ್ರಿಯೆ ನಡೆಯಲಿದೆ. ಇದರ ನಡುವೆ ಈಗೀನಿಂದಲೇ ಪಕ್ಷದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಕಸರತ್ತನ್ನು ನಡೆಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯ ಎರಡು ಕ್ಷೇತ್ರಗಳ ಸ್ವಪಕ್ಷೀಯ ಶಾಸಕರು, ಮಾಜಿ ಸಚಿವರು ಮತ್ತು ಪಕ್ಷದ ಪದಾದಿಕಾರಿಗಳು ಮೊಯ್ಲಿ ಪರ ಒಲವು ಹೊಂದಿದ್ದಾರೆ. ಟಿಕೆಟ್ ಕೊಡಿಸಿದ ಋಣವನ್ನು ತೀರಿಸಲು ರಕ್ಷಾ ರಾಮಯ್ಯ ಪರ ಒಬ್ಬರು ಶಾಸಕರು, ಸ್ವಸಮುದಾಯದ ನಾಯಕರು ಇದ್ದಾರೆ.
ಬಾಕ್ಸ್
ಸುಧಾಕರ್ ಹೆಸರು ಪ್ರಸ್ತಾಪ
ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲನುಭವಿಸಿದ ಮಾಜಿ ಸಚಿವ ಡಾ ಕೆ.ಸುಧಾಕರ್ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಗಳ ಬಗ್ಗೆ ಸ್ವಪಕ್ಷೀಯ ನಾಯಕರು ಮತ್ತು ಕಾರ್ಯಕರ್ತರು ಜಪಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದದಿಂದ ಪಕ್ಷ ಸೋಲಬೇಕಾಯಿತು. ಇದಕ್ಕೆ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿರುವ ಹಿನ್ನೆಲೆಯಲ್ಲಿ ಟಿಕೆಟ್ ನೀಡಿದಾಗ ಗೆಲುವು ಕಾಣಲು ಸಾಧ್ಯವಾಗುತ್ತದೆ ಎಂದೇಳಲಾಗುತ್ತಿದೆ.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಪರಿಚಯಿಸುವ, ನೆಲೆ ಮತ್ತು ಹೆಸರನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಶಿಡ್ಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಸೀಕಲ್ ರಾಮಚಂದ್ರಗೌಡರನ್ನು ಕಣಕ್ಕಿಳಿಸಲಾಯಿತು. ಇನ್ನು ವಯಸ್ಸು, ಪಕ್ಷದ ಸಂಘಟನೆಯಲ್ಲಿ ತಟಸ್ಥ ಧೋರಣೆ ಸೇರಿದಂತೆ ನಾನಾ ಕಾರಣಗಳಿಂದ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ಮತ್ತೆ ಬಿಜೆಪಿ ಟಿಕೆಟ್ ಸಿಗಲ್ಲ ಎನ್ನಲಾಗುತ್ತಿದೆ.
ಬಾಕ್ಸ್
ಮತ್ತೆ ತೆಕ್ಕೆಗೆ ಕಸರತ್ತು
ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ನೆಲಮಂಗಲ, ಯಲಹಂಕ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಸೇರಿದಂತೆ ೮ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಂಘಟನೆಯನ್ನು ಬಿರುಸುಗೊಳಿಸಿದೆ.
ಇಲ್ಲಿ ಮಾಜಿ ಸಂಸದ ಆರ್.ಜಾಲಪ್ಪ ರಾಜಕೀಯ ನಿವೃತ್ತಿಯ ಬಳಿಕ 2009 ರಲ್ಲಿ, ಹಾಗೆಯೇ 2014 ರಲ್ಲಿ ಈ ಕ್ಷೇತ್ರದಿಂದ ಮೊಯ್ಲಿ ಗೆಲುವು ಕಂಡಿದ್ದರು. ಕಳೆದ 2019 ರ ಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡರ ಎದುರು ಸೋತು, ಹ್ಯಾಟ್ರಿಕ್ ಸಾಧನೆಯಿಂದ ವಂಚಿತರಾಗಿದ್ದರು. ಇದೀಗ ಮತ್ತೆ ಆಕಾಂಕ್ಷಿಯಾಗಿದ್ದಾರೆ.
* ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶತಾಯ ಗತಾಯ ಗೆಲ್ಲಬೇಕು. ಮಾಜಿ ಸಚಿವ ಡಾ ಕೆ.ಸುಧಾಕರ್ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾದರೆ, ಸೋಲಿಸುವ ತನಕ ಸುಮ್ಮನಿರುವುದಿಲ್ಲ.
ಪ್ರದೀಪ್ ಈಶ್ವರ್ ಅಯ್ಯರ್, ಶಾಸಕ