

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಅಭ್ಯರ್ಥಿಗಳ ಪಂಚಿಂಗ್ ಡೈಲಾಗುಗಳು, ಘೋಷ ವಾಕ್ಯಗಳು ಗಮನ ಸೆಳೆಯುತ್ತಿವೆ.
ನನ್ನ ಜನ ನನ್ನ ಹೊಣೆ, ಯುವ ನಾಯಕ ನಮ್ಮ ರಾಮಯ್ಯ, ಅಭಿವೃದ್ಧಿಯ ಶ್ರೀರಕ್ಷೆ ಎನ್ನುವುದು ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷ ರಾಮಯ್ಯಗೆ ಸಂಬಂಧಿಸಿದ ಘೋಷ ವಾಕ್ಯಗಳು. ಮತ್ತೊಂದೆಡೆ ನಮ್ಮ ಜನ ನಾಯಕ, ಕ್ಷೇತ್ರದ ಸುಧಾರಕ ಸುಧಾಕರ ಎನ್ನುತ್ತಲೇ ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್‌ರನ್ನು ಹಾಡಿ ಹೊಗಳಲಾಗುತ್ತಿದೆ. ಅಭ್ಯರ್ಥಿಗಳನ್ನು ಹೊರತುಪಡಿಸಿದಂತೆ ಪಕ್ಷಗಳ ವಿಚಾರದಲ್ಲಿ ಇದು ನಮ್ಮ ಗ್ಯಾರಂಟಿ, ಜನರಿಗೆ ಕೈ ಅಭಯ ಎಂದು ಕಾಂಗ್ರೆಸ್ ಹೇಳುತ್ತಿದೆ. ದೇಶದ ಅಭಿವೃದ್ಧಿಗೆ ಮೋದಿಯೇ ಸರಿ ಈ ಬಾರಿ 400 ಮೀರಿ, ಮೋದಿ ಗ್ಯಾರೆಂಟಿ, ಮತ್ತೊಮ್ಮೆ ಮೋದಿ ಮತ್ತಷ್ಟು ಅಭಿವೃದ್ಧಿ, ವಿಕಸಿತ ಭಾರತ, ದೇಶದ ಅಭಿವೃದ್ಧಿಗೆ ಒಂದೇ ಪರಿಹಾರ ಮೋದಿ ಸರ್ಕಾರ ಎಂಬ ಸಂದೇಶಗಳು ಬಿಜೆಪಿ ವಲಯದಿಂದ ಕೇಳಿ ಬರುತ್ತಿವೆ. ಉಳಿದಂತೆ ಇತರ ಪಕ್ಷಗಳು ಜನ ಸಾಮಾನ್ಯರ ಧ್ವನಿ, ಭ್ರಷ್ಟಾಚಾರ ಮುಕ್ತ ಆಡಳಿತ ಎನ್ನುತ್ತಿವೆ.
* ಸಿನಿಮಾ ಹಾಡುಗಳ ಘರ್ಜನೆ
ಅಭ್ಯರ್ಥಿಗಳು ಭಾಗವಹಿಸಿರುವ ಕಾರ್ಯಕ್ರಮ, ಪ್ರಚಾರ ಸಭೆಗಳು ಮತ್ತು ರ‍್ಯಾಲಿಗಳಿಗೆ ಸಂಬಂಧಿಸಿದ ವಿಡಿಯೋಗಳಿಗೆ ಬೆಂಬಲಿಗರು ಕಿವಿ ನಿಮಿಸಿರುವ ಸಂಗೀತ, ಸಿನಿಮಾ ಹಾಡುಗಳನ್ನು, ನಟರ ಡೈಲಾಗುಗಳನ್ನು ಸೇರಿಸಿ, ದೊಡ್ಡ ನಾಯಕರು ಮತ್ತು ಉತ್ತಮ ನಾಯಕರು ಎನ್ನುವಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ಹೆಚ್ಚಿಗೆ ಕೆಜಿಎಫ್, ಬಾಹುಬಲಿ, ಸ್ಟಾಲಿನ್ ಸೇರಿದಂತೆ ತೆಲುಗು, ಕನ್ನಡ ಭಾಷೆಯ ನಾನಾ ಸಿನಿಮಾಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹ ಸಂದೇಶಾತ್ಮಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ, ಗಮನ ಸೆಳೆಯಲಾಗುತ್ತಿದೆ. ಇತ್ತೀಚೆಗೆ ಪೂಜಾ ಕಾರ್ಯಕ್ರಮದಲ್ಲಿ ಅಗ್ನಿಕೆಂಡದಲ್ಲಿ ಸಾಗಿದ ರಕ್ಷಾ ರಾಮಯ್ಯ, ಹಿಂದೆ ಜನರೊಂದಿಗೆ ಬೆರತು ಕೆಲಸ ಮಾಡಿದ ಸುಧಾಕರ್ ವಿಡಿಯೋಗಳೇ ಘರ್ಜಿಸುತ್ತಿವೆ. ಕ್ಷೇತ್ರದಾದ್ಯಂತ ಮತಗಳ ಬೇಟೆಗೆ ಉತ್ಸಾಹ ತುಂಬುತ್ತಿವೆ.
* ಪಂಚಿಂಗ್ ಡೈಲಾಗುಗಳು
ಆಂಧ್ರದ ಗಡಿ ಭಾಗದಲ್ಲಿರುವ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತ ಪ್ರಚಾರದಲ್ಲಿ ಕನ್ನಡ ಮತ್ತು ತೆಲುಗು ಭಾಷೆ ಮಿಶ್ರಿತ ಪಂಚಿಂಗ್ ಡೈಲಾಗುಗಳು ಹೆಚ್ಚಿಗೆ ಕೇಳಿ ಬರುತ್ತಿವೆ.
ಜಿಲ್ಲೆಯ ಗೌರಿಬಿದನೂರು, ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ, ಗುಡಿಬಂಡೆ ತಾಲೂಕು ಆಂಧ್ರ ಗಡಿಭಾಗದಲ್ಲಿವೆ. ಇಲ್ಲಿ ಮಾತೃ ಭಾಷೆಯ ಕನ್ನಡ ಬಳಕೆ ನಡುವೆ ತೆಲುಗೇ ಹೆಚ್ಚಿನ ಪ್ರಭಾವ ಹೊಂದಿದೆ. ಇದಕ್ಕೆ ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಕೈಗೊಳ್ಳುತ್ತಿರುವ ಬಹುತೇಕ ಅಭ್ಯರ್ಥಿಗಳು ತೆಲುಗಿನ ಭಾಷಣದ ಮೂಲಕ ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.
ಇತ್ತೀಚೆಗೆ ಬಾಗೇಪಲ್ಲಿಯಲ್ಲಿ ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್ ರಾಜ್ಯ ಸರ್ಕಾರದ ಗ್ಯಾರಂಟಿ ವಂಚನೆ, ಮೋದಿ ನಾಯಕತ್ವದ ಬಗ್ಗೆ ತೆಲುಗಿನಲ್ಲಿಯೇ ಪಂಚಿಂಗ್ ಡೈಲಾಗು ಹೊಡೆದು ಚಪ್ಪಾಳೆ ಗಿಟ್ಟಿಕೊಂಡಿದ್ದರು. ಮತ್ತೊಂದೆಡೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೆಲಗುವಿನಲ್ಲಿಯೇ ಮಮ್ಮಲ್ಲಿ ಎವುಡು ಆಪೇದಿ ಬುಜ್ಜಿ ಎಂಬ ಡೈಲಾಗು ಹೊಡೆಯುವುದನ್ನು ಮುಂದುವರೆಸಿದ್ದಾರೆ.