

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರಚಾರ ಕೈಗೊಳ್ಳುತ್ತಿರುವುದರ ನಡುವೆ ಅಭ್ಯರ್ಥಿಗಳ ಕುಟುಂಬಸ್ಥರು ಸಹ ಕ್ಷೇತ್ರದಾದ್ಯಂತ ಮತಬೇಟೆಗೆ ಇಳಿದಿದ್ದಾರೆ.
ಚುನಾವಣಾ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಪರ ತಂದೆ ಎಂ.ಆರ್.ಸೀತರಾಮ್, ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಪರ ತಂದೆ ಪಿ.ಎನ್.ಕೇಶವರೆಡ್ಡಿ, ಪತ್ನಿ ಡಾ ಪ್ರೀತಿ ಸುಧಾಕರ್, ರಾಜಕೀಯ ಇತರೆ ಪಕ್ಷಗಳು ಮತ್ತು ಪಕ್ಷೇತರ ನಾನಾ ಅಭ್ಯರ್ಥಿಗಳ ಪರ ಕುಟುಂಬಸ್ಥರು ಚಕ್ರ ಕಟ್ಟಿಕೊಂಡವರಂತೆ ತಿರುಗಾಡುತ್ತ ಮತ ಯಾಚಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಚುನಾವಣಾ ಕಾವು ನಿಧಾನವಾಗಿ ಹೆಚ್ಚಾಗುತ್ತಿದೆ. ಇನ್ನೂ ಮತದಾನಕ್ಕೆ 15 ದಿನ ಬಾಕಿದ್ದು ಪರಸ್ಪರ ಪೈಪೋಟಿಗೆ ಎಷ್ಟು ಕಡೆ ಸುತ್ತಾಡಿದರೂ ಸಾಲದು. ಒಂದು ಕಡೆ ಪ್ರಚಾರ ಕೈಗೊಂಡು ಮತದಾರರ ಮನವೊಲಿಸಿ ಬರುವಷ್ಟರಲ್ಲಿಯೇ ಪ್ರತಿಸ್ಪರ್ಧಿಗಳು ಸ್ಥಳಕ್ಕೆ ತೆರಳಿ ಗಮನ ಸೆಳೆಯುತ್ತಿದ್ದಾರೆ.
*ಹುರುಪು ತುಂಬುವ ಕುಟುಂಬಸ್ಥರು
ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಪೈಪೋಟಿ ತೀವ್ರವಾಗಿದೆ. ಪಕ್ಷದ ವೋಟ್ ಬ್ಯಾಂಕ್, ಸಮುದಾಯ ಬಲ, ವೈಯಕ್ತಿಕ ವರ್ಚಸ್ಸು, ಸ್ವಪಕೀಯ ಸರ್ಕಾರಗಳ ಸಾಧನೆ ಸೇರಿದಂತೆ ನಾನಾ ವಿಚಾರಗಳಲ್ಲಿ ಮತದಾರ ಸಮೂಹದಿಂದ ಭಿನ್ನ ಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ. ನಕಾರಾತ್ಮಕ ಮತ್ತು ಸಕಾರಾತ್ಮಕ ಬೆಳವಣಿಗೆಗಳಿಂದ ಅಭ್ಯರ್ಥಿಗಳು ಗೊಂದಲಕ್ಕೀಡಾಗುತ್ತಿದ್ದು ಸೋಲು ಗೆಲುವು ಕೊನೆಯ ಕ್ಷಣದಲ್ಲಿ ಯಾರ ಪರ ವಾಲಬಹುದು ಎಂಬ ಯೋಚನೆ ಕಾಡುತ್ತಿದೆ. ಇದಕ್ಕೆ ಅವರ ಕುಟುಂಬಸ್ಥರನ್ನು ಸಹ ಪ್ರಚಾರಕ್ಕಿಳಿಸುವ ಮೂಲಕ ಮತದಾರರ ಗಮನ ಸೆಳೆಯಲಾಗುತ್ತಿದೆ.
ಪ್ರತಿದಿನ ಕಾರ್ಯಕ್ರಮ ನಿಗದಿ, ಮುಖಂಡರು ಮತ್ತು ಕಾರ್ಯಕರ್ತರ ಸೇರಿಸುವಿಕೆ, ರ‍್ಯಾಲಿ ಮತ್ತು ಸಮಾವೇಶಗಳ ಆಯೋಜನೆ, ಪ್ರಚಾರ ವೈಖರಿಯ ಚರ್ಚೆ, ಚುನಾವಣಾ ವೆಚ್ಚ ಸರಿದೂಗಿಸುವಿಕೆ ಸೇರಿ ಬೇರೆ ಬೇರೆ ಚಟುವಟಿಕೆಗೆ ಕುಟುಂಬಸ್ಥರು ನೆರವಾಗುತ್ತಿದ್ದಾರೆ. ಆಗಾಗ ಸಂಭವಿಸುವ ವಿದ್ಯಮಾನಗಳ ಬಗ್ಗೆ ಚರ್ಚಿಸಿ, ಕಾರ್ಯಕರ್ತರಲ್ಲಿ ಹುರುಪು ತುಂಬುತ್ತಿದ್ದಾರೆ.
*ಸುಧಾಕರ್ ಪರ ಪ್ರಚಾರ
ಪ್ರತಿ ಚುನಾವಣೆಯ ಮಾದರಿಯಲ್ಲಿ ಮಗನ ಪರವಾಗಿ ಪಿ.ಎನ್.ಕೇಶವರೆಡ್ಡಿ ಮತಯಾಚಿಸುತ್ತಿದ್ದಾರೆ. ಇವರ ಜತೆಗೆ ತಮ್ಮಂದಿರು, ದಾಯಾದಿ ಕುಟುಂಬಸ್ಥರು ಸಾಥ್ ನೀಡುತ್ತಿದ್ದು ಇತ್ತೀಚೆಗೆ ಸುಧಾಕರ್ ಪತ್ನಿ ಪ್ರೀತಿ ಮೊದಲ ಬಾರಿಗೆ ಮನೆ ಮನೆಗೂ ಭೇಟಿ ನೀಡಿ ಮತವನ್ನು ಕೇಳಿದ್ದಾರೆ.
*ಮಗನಿಗಾಗಿ ತಂದೆಯೇ ಕಸರತ್ತು
ಮಗ ಎಂ.ಎಸ್.ರಕ್ಷಾ ರಾಮಯ್ಯ ಪರವಾಗಿ ವಿಧಾನಪರಿಷತ್ ಸದಸ್ಯ ಎಂ.ಆರ್.ಸೀತರಾಮ್ ಅನುಕೂಲಕರ ಪ್ರಚಾರದ ವ್ಯವಸ್ಥೆಯನ್ನು ಕೈಗೊಳ್ಳುತ್ತಿದ್ದಾರೆ. ಕಾರ್ಯಕ್ರಮಗಳಿಗೆ ಅಭ್ಯರ್ಥಿ ತೆರಳುವ ಒಂದು ದಿನ ಮೊದಲೇ ಸ್ವಪಕ್ಷೀಯ ಜನಪ್ರತಿನಿಧಿಗಳು ಮತ್ತು ನಾಯಕರು, ವಿವಿಧ ಸಮುದಾಯಗಳ ಮುಖಂಡರು, ಬೆಂಬಲಿಗರ ಸಭೆಗಳನ್ನು ನಡೆಸಿ, ಬೆಂಬಲದ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ.
*ಕುಟುಂಬಸ್ಥರ ಪ್ರಚಾರದ ಲಾಭ
ವಿಧಾನಸಭೆ, ಲೋಕಸಭಾ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಕುಟುಂಬಸ್ಥರು ಪ್ರಚಾರ ಕೈಗೊಳ್ಳುವುದು ವಾಡಿಕೆಯಾಗಿದೆ. ಇದು ಅಭ್ಯರ್ಥಿಗಳ ಒತ್ತಡವನ್ನು ತಗ್ಗಿಸಿರುವುದರ ನಡುವೆ ಆಯಾ ವ್ಯಾಪ್ತಿಯಲ್ಲಿ ರಾಜಕೀಯ ಬಲವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ.
ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಪರ ಪುತ್ರ ಹರ್ಷ ಮೊಯ್ಲಿ ಮತ್ತು ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಪರ ಪುತ್ರ ಶರತ್ ಬಚ್ಚೇಗೌಡ ಪ್ರಚಾರ ಕೈಗೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲೂ ಸಹ ಅಭ್ಯರ್ಥಿಗಳ ಕುಟುಂಬಸ್ಥರು ಮತದಾರರ ಬಳಿಗೆ ತೆರಳುತ್ತಿದ್ದಾರೆ.