

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣಾ ಸಮರಕ್ಕೆ ಸ್ಪರ್ಧಿಸುವ ನಿಟ್ಟಿನಲ್ಲಿ ಕೈ ಪಾಳಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಹೌದು! ಈಗಲೇ ಅಂತರಂಗದ ಒಲವಿನ ಬಹಿರಂಗ, ಸಂಘಟನಾತ್ಮಕ ಚಟುವಟಿಕೆ, ಕಾರ್ಯಕ್ರಮಗಳ ಮೂಲಕ ನಾಯಕರು ಸಿದ್ಧತೆಯ ವಾತಾವರಣವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಈ ಕ್ಷೇತ್ರದಲ್ಲಿ ಪ್ರಬಲವಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೆಸರು ಕೇಳಿ ಬರುತ್ತಿದೆ. ಇದರ ನಡುವೆ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಆಕಾಂಕ್ಷಿಗಳ ಸಾಲಿಗೆ ಸೇರಿದ್ದಾರೆ. ಮತ್ತೊಂದೆಡೆ ರಾಜ್ಯ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಸಚಿವರ ಪುತ್ರರು ಹೆಸರುಗಳು ಸಹ ಸ್ಪರ್ಧೆಯ ಒಲವಿಗೆ ಥಳಕು ಹಾಕಿಕೊಳ್ಳುತ್ತಿದ್ದು ಈಗೀನಿಂದಲೇ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತ ಹೋಗುತ್ತಿದೆ.
* ಮಹತ್ತರವಾದ ಸಭೆಗಳು
ರಾಜ್ಯದಲ್ಲಿ ಹೆಚ್ಚಿನ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್, ವಿಧಾನಸಭಾ ಚುನಾವಣಾ ಅಗ್ನಿಪರೀಕ್ಷೆ ಮುಗಿಯುತ್ತಿದ್ದಂತೆ ಲೋಕ ಸಮರದಲ್ಲಿ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಕಸರತ್ತು ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆಗಳು ನಡೆದಿವೆ. ಇದೇ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಲಾಗಿದೆ.
ಈಗ ಪ್ರಮುಖವಾಗಿ ರಕ್ಷಾ ರಾಮಯ್ಯ ಮತ್ತು ವೀರಪ್ಪ ಮೊಯ್ಲಿ ನಡುವೆಯೇ ಟಿಕೆಟ್ ಜೋರಾಗಿದೆ. ಇದಕ್ಕೆ ಪಕ್ಷದಲ್ಲಿ ಆಂತರಿಕವಾಗಿ ಮೂರು ಬಣಗಳು ಸೃಷ್ಟಿಯಾಗಿದ್ದು ಆಯಾ ನಾಯಕರ ಪರ ಬೆಂಬಲಿಗರು ಬ್ಯಾಟ್ ಬೀಸುತ್ತಿದ್ದಾರೆ. ಮತ್ತೊಂದೆಡೆ ಒಂದು ಬಣವು ತಟಸ್ಥವಾಗಿ ಉಳಿದು, ವರಿಷ್ಠರ ನಿರ್ಣಯ ಮೇಲೆ ಹೊರೆ ಹಾಕಿದೆ.
ಪ್ರಸ್ತುತ ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಒಲವು, ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ರಹಸ್ಯ ಸಮೀಕ್ಷೆ ನಡೆಯುತ್ತಿದೆ. ಇದಕ್ಕೆ ಆಕಾಂಕ್ಷಿಗಳು ಸಂಘಟನಾತ್ಮಕ ಚಟುವಟಿಕೆಯನ್ನು ಬಿರುಸುಗೊಳಿಸಿದ್ದಾರೆ. ಇತ್ತೀಚೆಗೆ ಮೊದಲ ಮತದಾನ, ನೋಂದಣಿ ಮತ್ತು ಯುವ ಸಂವಾದ ಕಾರ್ಯಕ್ರಮದ ಹೆಸರಿನಲ್ಲಿ ರಕ್ಷಾ ರಾಮಯ್ಯ ಚುನಾವಣೆಗೆ ಸಜ್ಜಾಗುತ್ತಿರುವುದನ್ನು ಪ್ರದರ್ಶಿಸಿದ್ದಾರೆ. ಇದರಿಂದ ಮುನಿಸಿಕೊಂಡಿರುವ ಮೊಯ್ಲಿ ಪ್ರತ್ಯೇಕವಾಗಿ ಬೆಂಬಲಿಗರ ಸಭೆಗಳನ್ನು ನಡೆಸಿ, ಆಗುಹೋಗುಗಳನ್ನು ವಿಮರ್ಶಿಸುತ್ತಿದ್ದಾರೆ.
* ತಟಸ್ಥ ಧೋರಣೆಯ ಸಂಸದರು
ಪುತ್ರ ಶಾಸಕ ಶರತ್ ಬಚ್ಚೇಗೌಡ ಕಮಲವನ್ನು ಬಿಟ್ಟು ಕೈ ಪಾಳಯ ಸೇರ್ಪಡೆಯಾಗುತ್ತಿದ್ದಂತೆ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ತಟಸ್ಥರಾಗಿದ್ದಾರೆ. ಕಳೆದ ಒಂದೂ ವರೆ ವರ್ಷದಿಂದ ಸರ್ಕಾರಿ ಕಾರ್ಯಕ್ರಮಗಳು, ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ನಿವೃತ್ತಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ.
ಕಳೆದ 2014 ಲೋಕಸಭಾ ಚುನಾವಣೆಯಲ್ಲಿ ಸ್ವಸಮುದಾಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದಾಗಿ ಮತಗಳು ವಿಭಜನೆಯಾಗಿ ಸೋಲು ಕಂಡಿದ್ದರು. ಈ ಸಮಸ್ಯೆಯನ್ನು 2019 ರಲ್ಲಿ ಬಗೆಹರಿಸಿಕೊಂಡಿದ್ದರ ಜತೆಗೆ ಮೋದಿ ಅಲೆಯಲ್ಲಿ ಭರ್ಜರಿ ಗೆಲುವು ಸಾಽಸಿದ್ದರು.