ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವೃತ್ತಿ, ವಿದ್ಯಾರ್ಹತೆ ಏನು?

437768648_993096745532918_8195195100821161646_n
Published on

ಎನ್.ವೆಂಕಟೇಶ್

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳ ವೃತ್ತಿ, ವಿದ್ಯಾರ್ಹತೆಯು ಚರ್ಚೆಗೆಗ್ರಾಸವಾಗಿದೆ.

ಹೌದು! ಘಟಾನುಘಟಿ ರಾಜಕಾರಣಿಗಳ ನಡುವೆ ನಿವೃತ್ತ ನೌಕರ, ವ್ಯಾಪಾರಿ, ಖಾಸಗೀ ಸಂಸ್ಥೆ ನೌಕರ, ಸಮಾಜಸೇವಕ, ವಕೀಲ, ಕೃಷಿಕ ಸೇರಿ ಹಲವರಿದ್ದಾರೆ. ಕನಿಷ್ಠ 4 ನೇ ತರಗತಿ ಮತ್ತು ಗರಿಷ್ಠ ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿದ್ದು ಅನೇಕರು ರಾಜಕೀಯ ಅನುಭವದ ಕೊರತೆಯ ನಡುವೆಯೂ ಚುನಾವಣಾ ಸಮರಕ್ಕೆ ಸೈ ಎಂದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇನ್ನೂ ವಿದೇಶದಲ್ಲಿ (ವೇಲ್ಸ್ ದೇಶ) ಎಂಬಿಎ ಮುಗಿಸಿ, ಬಂದಿದ್ದಾರೆ. ಉದ್ಯಮದಲ್ಲಿ ತೊಡಗಿಸಿಕೊಂಡಿರುವುದರ ಜತೆಗೆ ಸಮಾಜ ಸೇವೆಯನ್ನು ಕೈಗೊಳ್ಳುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಮಾಜಿ ಸಚಿವರು. ಮೂರು ಬಾರಿ (2013, 2018 ಮತ್ತು 2019) ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಕಳೆದ 2023 ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನುಂಡಿದ್ದು ಇದೀಗ ಲೋಕಸಮರಕ್ಕೆ ಧುಮುಕಿದ್ದಾರೆ. ವೈಯಕ್ತಿಕ ವರ್ಚಸ್ಸು, ಅನುಕಂಪದ ಅಲೆ ಮತ್ತು ಮೋದಿ ಅಲೆ ನೆಚ್ಚಿಕೊಂಡಿದ್ದಾರೆ. ಇವರು ವೈದ್ಯರು. ಎಂಬಿಬಿಎಸ್ ಮುಗಿಸಿದ್ದಾರೆ.

ಸಿಪಿಎಂ ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ ಹೋರಾಟಗಾರ. ಹಿಂದಿನಿಂದಲೂ ದಲಿತ, ಕಾರ್ಮಿಕ, ಮಹಿಳಾ ಸೇರಿದಂತೆ ಎಲ್ಲ ವರ್ಗದ ಜನರ ಪರ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಗ್ರಾ.ಪಂ.ನೌಕರರು ಸೇರಿ ಕಾರ್ಮಿಕ ವರ್ಗದ ಪರವಾಗಿ ಧ್ವನಿ ಎತ್ತುತ್ತ ಬರುತ್ತಿದ್ದಾರೆ. ಓದಿರುವುದು ಬಿಎಸ್ಸಿ.

* ಇತರ ಪಕ್ಷಗಳು ಲೆಕ್ಕ

ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಾರ್ಟಿಯಿಂದ ಎನ್.ಕಲಾವತಿ ಕಣಕ್ಕಿಳಿದ್ದು ಖಾಸಗೀ ಶಾಲಾ ಶಿಕ್ಷಕಿಯಾಗಿದ್ದಾರೆ. ಎಂ.ಎ.ಓದಿದ್ದಾರೆ. ದಿಗ್ವಿಜಯ ಭಾರತ ಪಾರ್ಟಿಯ ಎಸ್.ನಾಗೇಶ್ ವಿದ್ಯಾರ್ಹತೆ ಐದನೇ ತರಗತಿ. ವೃತ್ತಿ ವ್ಯಾಪಾರ. ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ್ ಪುಲೆ) ಟಿ.ಆರ್.ನಾರಾಯಣರಾವ್ ಸಮಾಜ ಸೇವಕರಾಗಿದ್ದು ಎಸ್ಸೆಸ್ಸೆಲ್ಸಿ ಓದಿದ್ದಾರೆ. ಇನ್ನೂ ಉತ್ತಮ ಪ್ರಜಾಕೀಯ ಪಕ್ಷವು ವಕೀಲ ವಿ.ವೆಂಕಟೇಶಮೂರ್ತಿಯನ್ನು (ಎಲ್‌ಎಲ್‌ಬಿ), ಕರ್ನಾಟಕ ರಾಷ್ಟ್ರ ರಕ್ಷಣಾ ಸಮಿತಿಯು ಪಿಯುಸಿ ಓದಿರುವ ಕಟ್ಟಡ ಗುತ್ತಿಗೆದಾರ ಜಿ.ಸುಬ್ರಮಣಿ, ಇಂಡಿಯನ್ ಮೂವ್ ಮೆಂಟ್ ಪಾರ್ಟಿಯು ಎಂ.ಎಸ್ಸಿ ಓದಿರುವ ಕೃಷಿಕ ಜಿ.ಎನ್.ಕೋದಂಡರೆಡ್ಡಿ ಮತ್ತು ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷವು ಎಸ್ಸೆಸ್ಸೆಲ್ಸಿ ಓದಿರುವ ಕೃಷಿಕ ರಾಜರೆಡ್ಡಿಯನ್ನು ಕಣಕ್ಕಿಳಿಸಿದೆ.

*ಪಕ್ಷೇತರರ ವೃತ್ತಿ, ವಿದ್ಯಾರ್ಹತೆ!

ಚುನಾವಣಾ ಕಣದಲ್ಲಿ ಅಂತಿಮವಾಗಿ 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಬಹುತೇಕ ಪಕ್ಷೇತರರದ್ದೇ ಬಹುಪಾಲು. ರಾಜಕೀಯ ಪಕ್ಷಗಳ ಬೆಂಬಲವಿಲ್ಲದೇ 20 ಮಂದಿ ಅಖಾಡಕ್ಕಿಳಿದಿದ್ದಾರೆ. ಈ ಪೈಕಿ ದ್ವಿತೀಯ ಪಿಯುಸಿ ಓದಿರುವ ಸಮಾಜ ಸೇವಕ ಡಿ.ಚಿನ್ನಪ್ಪ, ಕೃಷಿಕ ಎಚ್.ಸಿ.ಚಂದ್ರಶೇಖರ್ 10 ನೇ ತರಗತಿ, ಸ್ವಯಂ ಉದ್ಯೋಗಿ ದೇವರಾಜ್ ದ್ವಿತೀಯ ಪಿಯುಸಿ, ಸ್ವಯಂ ಉದ್ಯೋಗಿ ವಿ.ಎನ್.ನರಸಿಂಹಮೂರ್ತಿ ಬಿ.ಇ, ಸಮಾಜ ಸೇವಕ ನಸುರುಲ್ಲಾ 4 ನೇ ತರಗತಿ, ರೈತ ಎ.ಎಸ್.ಭಾಸ್ಕರ್ ಎಸ್ಸೆಸ್ಸೆಲ್ಸಿ, ವ್ಯಾಪಾರಿ ತುಮಕೂರಿನ ಮೋಹಿತ್ ನರಸಿಂಹಮೂರ್ತಿ ಎಸ್ಸೆಸ್ಸೆಲ್ಸಿ, ಕೃಷಿಕ ಜಿ.ಎನ್.ರವಿ ಐಟಿಐ, ಖಾಸಗೀ ಉದ್ಯೋಗಿ ರಾಜಣ್ಣ ಪಿಯುಸಿ, ನಿವೃತ್ತ ಸರ್ಕಾರಿ ನೌಕರ ಎಂ.ಆರ್.ರಂಗನಾಥ್ ಡಾಕ್ಟರ್ ಆಫ್ ಫಿಲಾಸಫಿ ಇನ್ ಮ್ಯಾನೇಜ್‌ಮೆಂಟ್, ಉದ್ಯಮಿ ಸಿ.ವಿ.ಲೋಕೇಶ್ ಗೌಡ ಬಿಇ, ರೈತ ವಲಸಪಲ್ಲಿ ಉತ್ತಪ್ಪ 6 ನೇ ತರಗತಿ, ವ್ಯಾಪಾರಿ ಟಿ.ವೆಂಕಟಶಿವುಡು 10 ನೇ ತರಗತಿ, ಉದ್ಯಮಿ ಕೆ.ವೆಂಂಕಟೇಶ್ 10 ನೇ ತರಗತಿ, ವಕೀಲ ಎನ್.ವೆಂಕಟೇಶಪ್ಪ ಎಲ್‌ಎಲ್‌ಬಿ, ಕೂಲಿ ಕಾರ್ಮಿಕ ಎನ್.ಸುಧಾಕರ್ ಬಿ.ಕಾಂ, ವಿದ್ಯುತ್ ಗುತ್ತಿಗೆದಾರ ಡಿ.ಸುಧಾಕರ್ ಐಟಿಐ, ಕೃಷಿಕ ಜಿ.ಸಂದೇಶ್ ಎಸ್ಸೆಸ್ಸೆಲ್ಸಿ ಓದಿದ್ದಾರೆ.

*ವಯಸ್ಸು, ಊರಿನ ಲೆಕ್ಕ

29 ಅಭ್ಯರ್ಥಿಗಳ ಪೈಕಿ ಕನಿಷ್ಠ 27 ವರ್ಷದಿಂದ ಗರಿಷ್ಠ 68 ವರ್ಷ ವಯಸ್ಸಿನವರು ಇದ್ದಾರೆ. ಇದರಲ್ಲಿ ಪಕ್ಷೇತರ ಅಭ್ಯರ್ಥಿ ನಿವೃತ್ತ ಸರ್ಕಾರಿ ನೌಕರರಾಗಿರುವ ಎಂ.ಆರ್.ರಂಗನಾಥ್ (68 ವರ್ಷ) ಹಿರಿಯರು. ಇನ್ನೂ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಾರ್ಟಿಯ ಎನ್.ಕಲಾವತಿ (27 ವರ್ಷ) ಕಿರಿಯರಾಗಿದ್ದಾರೆ.

ಇನ್ನೂ 25 ರಿಂದ 30 ವರ್ಷದೊಳಗಿನವರು ಮೂವರು, 30 ಕ್ಕೂ ಮೇಲ್ಟಟ್ಟು ಮತ್ತು 40 ವರ್ಷದೊಳಗಿನವರು ಹತ್ತು, 40 ಕ್ಕೂ ಮೇಲ್ಪಟ್ಟು ಮತ್ತು 50 ವರ್ಷದೊಳಗಿನವರು ಎಂಟು, 50 ಕ್ಕೂ ಮೇಲ್ಪಟ್ಟು ಮತ್ತು 65 ವರ್ಷದೊಳಗಿನವರು ಏಳು, 65 ಕ್ಕೂ ಮೇಲ್ಟಟ್ಟು ಮತ್ತು 70 ವರ್ಷದೊಳಗಿನವರು ಒಬ್ಬರು ಇದ್ದಾರೆ.

ಬಾಕ್ಸ್

ವಿವಿಧ ಪ್ರದೇಶದ ಅಭ್ಯರ್ಥಿಗಳು

8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಆಂಧ್ರದ ಸತ್ಯಸಾಯಿ ಜಿಲ್ಲೆ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕುಗಳಿಂದಲೂ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ವೈದ್ಯ: 1

ಗುತ್ತಿಗೆದಾರ: 3

ವಕೀಲ: 2

ಶಿಕ್ಷಕಿ: 1

ವ್ಯಾಪಾರಿ: 3

ಸಮಾಜ ಸೇವಕ: 3

ಕೃಷಿಕ: 7

ಹೋರಾಟಗಾರ: 1

ಕಾರ್ಮಿಕ: 1

ಸ್ವಯಂ ಉದ್ಯೋಗ: 2

ಉದ್ಯಮಿ: 3

ನಿವೃತ್ತ ಸರ್ಕಾರಿ ನೌಕರ: 1

ಖಾಸಗೀ ನೌಕರ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net