ಕೆವಿಜಿ ಬ್ಯಾಂಕ್ ಕಳ್ಳತನಕ್ಕೆ ಯತ್ನ

LKP 28-1
Published on

ಲೋಕಾಪುರ: ಸಮೀಪದ ಮುದ್ದಾಪುರ ಗ್ರಾಮದಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ (ಕೆವಿಜಿ) ಬ್ಯಾಂಕ್‌ಗೆ ಸೋಮವಾರ ರಾತ್ರಿ 2 ಗಂಟೆ ವೇಳೆ ನುಗ್ಗಿದ ಕಳ್ಳರು ಕಳ್ಳತನ ಮಾಡಲು ಯತ್ನಿಸಿದ್ದಾರೆ.

ಮೊದಲು ಷಟರ್ ಮತ್ತು ಬಾಗಿಲಿಗೆ ಹಾಕಿದ್ದ ಎರಡೂ ಬೀಗಗಳನ್ನು ಒಡೆದು ಕಳ್ಳರು ಒಳಗೆ ಪ್ರವೇಶಿಸಿದ್ದು ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಭದ್ರತಾ ಕೊಠಡಿಯ ಲಾಕರ್‌ನಲ್ಲಿದ್ದ ಹಣ ದೋಚಲು ಪ್ರಯತ್ನಿಸಿದ್ದಾರೆ.

ಬ್ಯಾಂಕ್‌ನ ಸೈರನ್ ವೈಯರ್ ಕಟ್ಟ ಮಾಡಲಾಗಿದೆ. ಶನಿವಾರ, ಭಾನುವಾರ, ಸೋಮವಾರ ಮೂರು ದಿನ ಬ್ಯಾಂಕ್ ರಜೆ ಇರುವುದರಿಂದ ಬ್ಯಾಂಕ್ ಸಿಬ್ಬಂದಿ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಬಂದಾಗ ಕಳ್ಳತನ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ ಕಾಗದ, ಬಂಗಾರ, ಹಣ ಎಲ್ಲವೂ ಸುರಕ್ಷಿತವಾಗಿದೆ ಎಂದು ಕೆವಿಜಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಐ.ಪಿ. ಮಹಾಬಳಶೆಟ್ಟಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಶ್ವಾನದಳದ ಸಿಬ್ಬಂದಿ ಕೆ.ಎಸ್. ಗೌಡರ ಹಾಗೂ ಬೆರಳಚ್ಚು ವಿಭಾಗದ ಸಿಬ್ಬಂದಿ ತಿಪ್ಪಣ್ಣ ಮಾದರ, ಪಿಎಸ್‌ಐ ಶಿವಶಂಕರ ಮುಕರಿ ಭೇಟಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 15 ವರ್ಷಗಳ ಹಿಂದೆ ಇದೇ ಬ್ಯಾಂಕ್ ಕಳ್ಳತನವಾಗಿತ್ತು. ಹಳೇ ಕಟ್ಟಡ ಇರುವುದರಿಂದ ಬ್ಯಾಂಕ್ ಶಾಖೆಯನ್ನು ಸುಸಜ್ಜಿತ ನೂತನ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಗ್ರಾಹಕರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net