

ಲೋಕಾಪುರ: ಗ್ರಾಮದ ಆರಾಧ್ಯ ದೈವ ಲೋಕೇಶ್ವರ ಜಾತ್ರೆ ನಿಮಿತ್ತ ಶನಿವಾರ ಸಂಜೆ ಸಾವಿರಾರು ಭಕ್ತರ ನಡುವೆ ಅತಿ ವಿಜೃಂಭಣೆಯಿಂದ ಮಹಾ ರಥೋತ್ಸವ ಜರುಗಿತು. ಭಕ್ತರು ಹರ ಹರ ಮಹಾದೇವ ಎಂದು ಜೈ ಕಾರ ಹಾಕುತ್ತ ರಥೋತ್ಸವ ಎಳೆದು ಸಂಭ್ರಮಿಸಿದರು.
ಲೋಕೇಶ್ವರ ದೇವಸ್ಥಾನದಿಂದ ಆರಂಭವಾದ ರಥೋತ್ಸವ ಬೆಳಗಾವಿ ರಾಯಚೂರು ರಾಜ್ಯ ಹೆದ್ದಾರಿ ರಸ್ತೆಯ ಮೇಲೆ ರಥ ಸಾಗುತ್ತಿದ್ದಂತೆಯೇ ಭಕ್ತರು ಉತ್ತತ್ತಿ, ಬಾಳೆಹಣ್ಣು ಹೂಗಳನ್ನು ಎಸೆದು ಭಕ್ತಿಯಿಂದ ನಮಸ್ಕರಿಸಿದರು. ಯುವಕರು, ಊರಿನ ಹಿರಿಯರು ರಥದ ಹಗ್ಗ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವ ಬಸ್ ನಿಲ್ದಾಣ ಹತ್ತಿರ ಇರುವ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿ ಮರಳಿ ದೇವಸ್ಥಾನದ ಹತ್ತಿರ ಬರುತ್ತಿದ್ದಂತೆಯೇ ಭಕ್ತರ ಸಂಭ್ರಮ ಮುಗಿಲು ಮುಟ್ಟಿತು.
ರಥ ಸಾಗುವ ಹೆದ್ದಾರಿ ಪಕ್ಕದ ಎಡ-ಬಲ ಬದಿಯಲ್ಲಿ ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ನಿಂತು ಲೋಕೇಶ್ವರನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಜಾತ್ರೆ ನಿಮಿತ್ತ ದೇವಸ್ಥಾನ ದೀಪಾಲಂಕಾರದಿಂದ ಝಗಮಗಿಸುತ್ತಿತ್ತು.
ಡಿಸಿಎಂ ಗೋವಿಂದ ಕಾರಜೋಳ ರಥೋತ್ಸವದಲ್ಲಿ ಭಾಗವಹಿಸಿ ಭಕ್ತಿ ಮೆರೆದರು. ಸ್ಥಳೀಯ ಗಣ್ಯರಾದ ಲೋಕಣ್ಣ ಚನ್ನಪ್ಪ ಉದಪುಡಿ ಅವರ ಸಹಕಾರದೊಂದಿಗೆ ಜಾತ್ರಾ ಕಮಿಟಿ ಅಧ್ಯಕ್ಷ ಕಿರಣರಾವ್ ಮೋಹನರಾವ್ ದೇಸಾಯಿ ಅವರ ನೇತೃತ್ವದಲ್ಲಿ ರಥೋತ್ಸವ ಜರುಗಿತು. ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಪೊಲೀಸ್ ಬಂದೋಬಸ್ತ್
ಡಿವೈಎಸ್ಪಿ ಆರ್.ಕೆ. ಪಾಟೀಲ, ಸಿಪಿಐ ಎಚ್.ಆರ್. ಪಾಟೀಲ ಹಾಗೂ ಪಿಎಸ್‌ಐ ಶಿವಶಂಕರ ಮುಕರಿ ನೇತೃತ್ವದಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
EndFragment