ಪುರುಷೋತ್ತಮ ಪೂಂಜರು ವಿದ್ವತ್ ಪೂರ್ಣ ಕಲಾವಿದರಾಗಿದ್ದರು: "ಲೋಕಾಭಿರಾಮ'- ಕೃತಿ ಬಿಡುಗಡೆಗೊಳಿಸಿ ಪ್ರೊ.ಶ್ರೀಪತಿ ಮೆಚ್ಚುಗೆ

mng- set 21- Yakshagana prasanga
ಬೊಟ್ಟಿಕೆರೆಯ ಅಂಬುರುಹದಲ್ಲಿ ಭಾನುವಾರ ನಡೆದ ಯಕ್ಷ ಶ್ರಾವಣ ಶ್ರವಣ 2023 ಕಾರ್ಯಕ್ರಮದಲ್ಲಿ ದಿ.ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ವಿರಚಿತ ಅರ್ಥಸಹಿತವಾದ ಯಕ್ಷಗಾನ ಪ್ರಸಂಗ ’ಲೋಕಾಭಿರಾಮ’ ಕೃತಿಯನ್ನು ಪ್ರೊ.ಶ್ರೀಪತಿ ಕಲ್ಲೂರಾಯ ಬಿಡುಗಡೆಗೊಳಿಸಿದರು. ಪ್ರತಿಷ್ಠಾನದ ಬೊಟ್ಟಿಕೆರೆ ಅಧ್ಯಕ್ಷೆ ಶೋಭಾ ಪೂಂಜಾ, ಉಪಾಧ್ಯಕ್ಷ ರಾಜಾರಾಂ ಹೊಳ್ಳ ಮುಂತಾದ ಉಪಸ್ಥಿತರಿದ್ದರು.
Published on

ಮುಡಿಪು: ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಯಕ್ಷಗಾನದ ಹಿಮ್ಮೇಳ ಮುಮ್ಮೇಳದಲ್ಲಿ ತೊಡಗಿಕೊಂಡು ಸವ್ಯಸಾಚಿಯಾಗಿ ಗುರುತಿಸಿಕೊಂಡಿರುವುದರ ಜೊತೆಗೆ ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಓರ್ವ ವಿದ್ವತ್ ಪೂರ್ಣ ಕಲಾವಿದರಾಗಿದ್ದರು ಎಂದು ಮಂಗಳೂರು ವಿವಿ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಹೇಳಿದರು.
ಅಂಬುರುಹ ಯಕ್ಷಪ್ರತಿಷ್ಠಾನ ಬೊಟ್ಟಿಕೆರೆ ವತಿಯಿಂದ ಬೊಟ್ಟಿಕೆರೆಯ ಅಂಬುರುಹದಲ್ಲಿ ಭಾನುವಾರ ನಡೆದ ಯಕ್ಷ ಶ್ರಾವಣ ಶ್ರವಣ 2023 ಕಾರ್ಯಕ್ರಮದಲ್ಲಿ ದಿ.ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ವಿರಚಿತ ಅರ್ಥಸಹಿತವಾದ ಯಕ್ಷಗಾನ ಪ್ರಸಂಗ ’ಲೋಕಾಭಿರಾಮ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪೂಂಜರು ಸರಳತೆಯ ವ್ಯಕ್ತಿತ್ವದ ಶ್ರಮಜೀವಿಯಾಗಿದ್ದರು. ಸೂಕ್ಷ್ಮತೆ ಮತ್ತು ತೀಕ್ಷ್ಮತೆಯ ಸೆಳೆಯಲ್ಲಿ ಅವರು ಕಥಾನಕವನ್ನು ನೋಡುತ್ತಾರೆ ಹಾಗೂ ನಿರೂಪಿಸುತ್ತಾರೆ. ಇದು ಅವರ ವಿಶೇಷತೆಯಾಗಿತ್ತು. ಪೂಂಜರ ಕನಸಿನ ಅಂಬುರುಹ ಯಕ್ಷಗಾನ ಪ್ರತಿಷ್ಠಾನದ ವತಿಯಿಂದ ಯಕ್ಷಗಾನಕ್ಕೆ ಸಂಬಂಧಿಸಿದ ಅನೇಕ ಕಾರ್ಯಯೋಜನೆಗಳು ಮುನ್ನಡೆಯುತ್ತಿದ್ದು , ಅದರಲ್ಲೂ ಈ ಪ್ರತಿಷ್ಠಾನದ ಮೂಲಕ ಯುವ ಸಮುದಾಯ ಹೆಚ್ಚುಹೆಚ್ಚು ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ಅಂಬುರುಹ ಯಕ್ಷಪ್ರತಿಷ್ಠಾನ ಬೊಟ್ಟಿಕೆರೆ ಅಧ್ಯಕ್ಷ ಶೋಭಾ ಪೂಂಜಾ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ರಾಜಾರಾಂ ಹೊಳ್ಳ ಪ್ರಸ್ತಾವನೆಗೈದರು. ಪ್ರತಿಷ್ಠಾನದ ದೀವಿತ್ ಕೋಟ್ಯಾನ್ ಕೃತಿ ಪರಿಚಯಿಸಿದರು. ಕಲಾವಿದ ಸದಾಶಿವ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಲೋಕಾಭಿರಾಮ ಪ್ರಸಂಗದ ಆಯ್ದ ಭಾಗದ ಯಕ್ಷಗಾನ ತಾಳಮದ್ದಳೆ ಹಾಗೂ ನರಶಾರ್ದೂಲ ಯಕ್ಷಗಾನ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net