ಕರ್ತವ್ಯಲೋಪ ಎಸಗಿದವರಿಗೆ ಲೋಕಾ ಶಾಕ್​

16 bangarpete 1
Published on

ಬಂಗಾರಪೇಟೆ: ತಾಲೂಕಿನ ವಿವಿಧ ಇಲಾಖೆಗಳ ಮೇಲೆ ಮೇ 6ರಂದು ದಾಳಿ ನಡೆಸಿದ್ದ ಉಪಲೋಕಾಯುಕ್ತ ಬಿ.ವೀರಪ್ಪ, ಕರ್ತವ್ಯದಲ್ಲಿ ಉದಾಸೀನತೆ, ದಾಖಲೆಗಳ ಅಸಮರ್ಪಕ ನಿರ್ವಹಣೆ ಸೇರಿ ವಿವಿಧ ಕಾರಣಗಳಿಗಾಗಿ 32 ಅಧಿಕಾರಿಗಳ ಮೇಲೆ 9 ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಈ ಪೈಕಿ ಕಂದಾಯ ಇಲಾಖೆಯಲ್ಲಿ 7, ತಾಲೂಕು ಪಂಚಾಯಿತಿ 3, ಪುರಸಭೆ 3, ಕೃಷಿ ಇಲಾಖೆ 2, ಕೆಎಸ್ಸಾರ್ಟಿಸಿ 3, ಉಪನೋಂದಣಿ ಇಲಾಖೆ 3, ಸಾರ್ವಜನಿಕ ಆಸ್ಪತ್ರೆ 6 ಮತ್ತು ಎಪಿಎಂಸಿಯ 3 ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ತಾಲೂಕು ಕಚೇರಿಯ ದ್ವೀತಿಯ ದರ್ಜೆಯಲ್ಲಿ 45ಕ್ಕೂ ಹೆಚ್ಚು ಅರ್ಜಿ ಬಾಕಿ ಇರುವುದು, ರೆಕಾರ್ಡ್ಸ್​ ರೂಮಿಗೆ ಬೀಗ ಹಾಕಿ ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ತಹಸೀಲ್ದಾರ್​ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸದಿರುವುದು, ತೆರಿಗೆ ಬಾಕಿ ಉಳಿಸಿಕೊಂಡಿರುವವರ ಮಾಹಿತಿ ನೀಡದಿರುವ ಕಾರಣ ಮುಖ್ಯಾಧಿಕಾರಿ ಸತ್ಯನಾರಾಯಣ, ಜೆಇ ರವಿ, ಮಹೇಶ್​ ವಿರುದ್ಧ ಹಾಗೂ ಕೃಷಿ ಇಲಾಖೆ

ಬೇತಮಂಗಲ ಹೋಬಳಿಗೆ ಸಂಬಂಧಿಸಿದಂತೆ ಹನಿ ನೀರಾವರಿಗೆ ಸಲ್ಲಿಸಿದ್ದ ಅರ್ಜಿಗಳಲ್ಲಿ ಯಾವುದೇ ವರದಿ ತಯಾರಿಸದೆ ಖಾಲಿ ಹಾಳೆಯಲ್ಲಿ ಕೃಷಿ ಅಧಿಕಾರಿ ಎಂ.ಮೇಘಮಾಲಾ ಸಹಿ ಮಾಡಿರುವ ಬಿಲ್​ಗೆ ಪಾವತಿ ಮಾಡಿರುವುದು, ಸಹಾಯಕ ನಿರ್ದೇಶಕಿ ಎಸ್​. ಪ್ರತಿಭಾ ಮೊಬೈಲ್​ನಲ್ಲಿನ ಯುಪಿಐ ವಹಿವಾಟು ವೇತನಕ್ಕಿಂತ ಹೆಚ್ಚಾಗಿರುವ ಕಾರಣ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.

ಉಪ ನೋಂದಣಿ ಕಚೆೇರಿಯ ಡೆಟಾ ಎಂಟ್ರಿ ಆಪರೇಟರ್​ ವಿಜಯ್​ಕುಮಾರ್​ ಅವರ ಯುಪಿಐನಲ್ಲಿ ವೇತನಕ್ಕಿಂತ ಹೆಚ್ಚಿನ ವಹಿವಾಟು ಮಾಡಿರುವುದು ಹಾಗೂ ಕಚೇರಿಯಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದನ್ನು ಗಮನಿಸಿ ಉಪ ನೋಂದಣಾಧಿಕಾರಿ ಸುಮಲತಾ, ಕಚೇರಿಯ ಆರ್​.ಮುರಳೀಧರ್​, ವಿಜಯ್​ಕುಮಾರ್​ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಾಖಲೆ ನಿರ್ವಹಿಸದ ಇಒ

ಸರ್ಕಾರದಿಂದ ಅನಿರ್ಬಂಧಿತ ಅನುದಾನದಲ್ಲಿ ಬಿಡುಗಡೆಯಾದ 1 ಕೋಟಿ ರೂ.ನಲ್ಲಿ ನಿರ್ವಹಿಸಿದ ಕಾಮಗಾರಿಗಳ ವಿವರ, ಆ್ಯಕ್ಷನ್​ ಪ್ಲ್ಯಾನ್​, ಅಂದಾಜುಪಟ್ಟಿ ಹಾಗೂ ಅಂತಿಮ ಬಿಲ್​, ಕಡಿತಗೊಳಿಸಿದ ಹಣದ ಬಗ್ಗೆ ದಾಖಲಾತಿ ನೀಡುವಂತೆ ಹಾಗೂ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 236 ಗ್ರಾಮಗಳಲ್ಲಿ ಇಂಗುಗುಂಡಿ ಮಾಡಲು ಸುತ್ತೋಲೆ ಹೊರಡಿಸಿದ ಆದೇಶ ಪ್ರತಿ ಸಲ್ಲಿಸದಿರುವ ಕಾರಣ ಇಒ ರವಿಕುಮಾರ್​ ಮೇಲೆ ದೂರು ದಾಖಲಾಗಿದೆ.

ಸರ್ವೇ ಇಲಾಖೆ ಮೂವರ ವಿರುದ್ಧ ಕ್ರಮ

ಸರ್ವೇ ಇಲಾಖೆಯ ಎಡಿಎಲ್​ಆರ್​ ಪರಶಿವಮೂರ್ತಿ ಅವರ ಯುಪಿಐ ವಹಿವಾಟು ವೇತನಕ್ಕಿಂತ ಹೆಚ್ಚಿರುವುದು, ಸಿಬ್ಬಂದಿ ಗುರುತಿನ ಚೀಟಿ ಧರಿಸದಿರುವುದು, ಭೂ ಮಾಪಕಿ ತ್ರೀವೇಣಿ ಅವರು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಬ್ಯಾಂಕ್​ನಿಂದ 7 ಲಕ್ಷ ರೂ.ಪಡೆದಿವುದು, ರೆಕಾರ್ಡ್ಸ್​ ಕೀಪರ್​ ವಿ.ಕೆ.ಹರೀಶ್​ ಬಳಿ 100 ಅರ್ಜಿ ಬಾಕಿ ಇರುವುದರಿಂದ ಪರಶಿವಮೂರ್ತಿ, ತ್ರಿವೇಣಿ ಮತ್ತು ಹರೀಶ್​ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶೌಚಕ್ಕೆ 10 ರೂ.ವಸೂಲಿ

ಪಟ್ಟಣದ ಪ್ರಯಾಣಿಕ ತಂಗುದಾಣದಲ್ಲಿ ಶೌಚಗೃಹಕ್ಕೆ 2 ರೂ. ನಿಗದಿಪಡಿಸಿ 10 ರೂ. ವಸೂಲು ಮಾಡುತ್ತಿರುವುದು, ಸ್ವಚ್ಛತೆ, ಕುಡಿಯುವ ನೀರು, ಕ್ಯಾಂಟೀನ್​ ವ್ಯವಸ್ಥೆ ಇಲ್ಲದಿವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಕ ಕೃಷ್ಣಪ್ಪ, ಡಿಪೋ ವ್ಯವಸ್ಥಾಪಕಿ ನೇತ್ರಾವತಿ, ಜಿಲ್ಲಾ ಸಂಚಾರಿ ಅಧಿಕಾರಿ ಮಂಜುನಾಥ್​ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಲೂಕು ಆಸ್ಪತ್ರೆಯಲ್ಲಿ ಕರ್ಮಕಾಂಡ!

ತಾಲೂಕು ಆಸ್ಪತ್ರೆಯಲ್ಲಿ ಆಂಬುಲೆನ್ಸ್​ಗಳು ಪ್ರವೇಶಿಸಲು ಜಾಗ ಕಿರಿದಾಗಿದ್ದು, ಬಿಪಿಎಲ್​ ಕಾರ್ಡ್​ದಾರರಿಗೆ ಉಚಿತ ಚಿಕಿತ್ಸೆ ಕಾರ್ಡ್​ ನೀಡುವ ಬದಲು 10 ರೂ. ಪಡೆಯುತ್ತಿರುವುದು, ರೋಗಿಗಳಿಗೆ ಹೊರಗಡೆ ಔಷಧ ಖರೀದಿಸುವಂತೆ ಸಲಹೆ ನೀಡುತ್ತಿದ್ದ ಆರೋಪದಲ್ಲಿ ಡಾ.ಪಿ. ಭಾರತಿ, ಡಾ.ಬಿ.ಸುನಿಲ್​ ಕುಮಾರ್​, ಡಾ.ಅನಿತಾಬದನ್​, ಆಸ್ಪತ್ರೆಯ ಫಾಮಾರ್ಸಿಸ್ಟ್​ ದಿವ್ಯಾರಾಣಿ, ಸಿ.ಎಲ್​.ವಿನು, ಡಾ.ಜಿ.ಎಸ್​.ಶ್ರೀನಿವಾಸ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾರುಕಟ್ಟೆಯಲ್ಲಿ ದಲ್ಲಾಳಿಗಳದ್ದೇ ಕಾರುಬಾರು

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ, ರೈತರು ಮಾರಾಟ ಮಾಡಿದ ಉತ್ಪನ್ನಕ್ಕೆ ಅಧಿಕೃತ ಲೆಕ್ಕದ ಪಟ್ಟಿ ನೀಡದೆ, ಬಿಳಿ ಚೀಟಿಯಲ್ಲಿ ಬರೆದು ಕೊಡುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಶ್ರೀನಿವಾಸ್​, ಮೇಲ್ವಿಚಾರಕ ಎ.ವಿ.ಅಯ್ಯಪ್ಪ, ಪ್ರಥಮ ದರ್ಜೆ ಗುಮಾಸ್ತ ಪಿ.ಎನ್​.ಜಗನ್ನಾಥ ವಿರುದ್ಧ ಸೂಮೋಟೊ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net