

ಬೆಂಗಳೂರು: ಸರ್ಕಾರಿ ಕಚೇರಿಯ ಅವಧಿಯಲ್ಲಿ ಸಿಬ್ಬಂದಿ ಕೆಲಸ ಮಾಡದೇ ಕ್ರಿಕೆಟ್ ಆಟವಾಡಲು ಹೋಗಿರುವುದು. ತಹಶೀಲ್ದಾರ್ ಒಬ್ಬರು ಲೋಕಾಯುಕ್ತ ಅಧಿಕಾರಿಗಳು ಕರೆ ಮಾಡಿದರೂ ಸಹ ಸ್ವೀಕರಿಸದೇ ಇರುವುದು. ತಹಶೀಲ್ದಾರ್ ಗಾಗಿ ಕಾದು ಕಾದು ಸುಸ್ತಾತ ಅಧಿಕಾರಿಗಳು… ಇದು ಶನಿವಾರ ಲೋಕಾಯುಕ್ತ ಅಧಿಕಾರಿಗಳು ತಾಲೂಕು ಕಚೇರಿ ಮೇಲೆ ದಾಳಿ ನಡೆಸಿದ್ದಾಗ ಕಂಡು ಬಂದ ದೃಶ್ಯಗಳು.
ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ೯ ತಹಸೀಲ್ದಾರ್ ಕಚೇರಿಗಳ ಮೇಲೆ ಶನಿವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಲವು ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂ.ನಗರ ಜಿಲ್ಲೆಯ ಬೆಂಗಳೂರು ಉತ್ತರ, ದಕ್ಷಿಣ, ಯಲಹಂಕ, ಪೂರ್ವ ಮತ್ತು ಆನೇಕಲ್ ತಾಲೂಕು ಕಚೇರಿಗಳ ಮೇಲೆ ಹಾಗೂ ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ನಾಲ್ಕು ಸೇರಿ ಒಟ್ಟು ೯ ತಹಶೀಲ್ದಾರ್ ಕಚೇರಿಗಳ ಮೇಲೆ ೫೦ ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಮಧ್ಯಾಹ್ನ ೧೨ ಗಂಟೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಕಂದಾಯ ಭವನದಲ್ಲಿರುವ ಉತ್ತರ ಹಾಗೂ ಯಲಹಂಕ ತಹಸೀಲ್ದಾರ್ ಕಚೇರಿಗಳಿಗೆ ಖುದ್ದು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಹಸೀಲ್ದಾರ್ ಕಚೇರಿ ಮೇಲೆ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ನೇತೃತ್ವದ ತಂಡವು ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಹಲವು ವರ್ಷಗಳಿಂದ ಆದಾಯ, ಜಾತಿ ಪ್ರಮಾಣ, ಮಾಶಾಸನ ಸೇರಿ ಇತರೆ ಅರ್ಜಿಗಳ ವಿಲೇವಾರಿಯನ್ನು ಮಾಡಿಲ್ಲ ಎಂಬ ಹಲವು ದೂರುಗಳನ್ನು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಬಳಿ ಸಂತ್ರಸ್ತರು ಹಂಚಿಕೊಂಡರು. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್, ಕಚೇರಿಗೆ ಬಾರದಿರುವುದು ಸೇರಿ ಸೂಕ್ತವಾಗಿ ಕೆಲಸ ನಿರ್ವಹಿಸದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
600 ದೂರುಗಳು ದಾಖಲು:
ತಾಲ್ಲೂಕು ಕಚೇರಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅವ್ಯವಹಾರ, ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಗಿಂದಾಗ್ಗೆ ಲೋಕಾಯುಕ್ತ ಸಂಸ್ಥೆಯ ಗಮನ ಸೆಳೆಯುತ್ತಿದ್ದರು. ತಾಲ್ಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂದು ಲೋಕಾಯುಕ್ತಕ್ಕೆ ಪದೇ ಪದೇ ದೂರುಗಳು ಬರುತ್ತಿದ್ದವು. ಲೋಕಾಯುಕ್ತರು ಸಂಸ್ಥೆಯ ಅಧಿಕಾರಿಗಳ ಮುಖಾಂತರ ಗೌಪ್ಯ ತನಿಖೆ ನಡೆಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ತನಿಖೆಯಲ್ಲಿ ಅಲ್ಲಿನ ಅಕ್ರಮಗಳು ಖಾತ್ರಿಯಾಗಿತ್ತು. ಲೋಕಾಯುಕ್ತ ಸಂಸ್ಥೆಯಲ್ಲಿಯೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಕಚೇರಿಗಳಿಗೆ ಸಂಬಂಧಿಸಿದಂತೆ ೫೯೯ ಪ್ರಕರಣಗಳು ದಾಖಲಾಗಿತ್ತು. ಈ ದೂರುಗಳು ತಾಲ್ಲೂಕು ಕಚೇರಿಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಪುಷ್ಟಿಕರಿವೆ.
ದಾಳಿ ವೇಳೆ ಹಲವು ದಾಖಲೆಗಳು ಪತ್ತೆ:
ಲೋಕಾಯುಕ್ತ ದಾಳಿ ವೇಳೆ ಸಹಿ ಮಾಡದೆ ಬಾಕಿ ಇರುವ ದಾಖಲೆಗಳು, ವಿಲೇವಾರಿ ಮಾಡದೆ ಇಟ್ಟಿರುವ ಫೈಲ್ಗಳು, ಫೋರ್ಜರಿ ಫೈಲ್, ಹಲವು ವರ್ಷದಿಂದ ಕೊಳೆಯುತ್ತಿರುವ ಇರುವ ಫೈಲ್ಗಳು ಪತ್ತೆ ಆಗಿವೆ. ದಕ್ಷಿಣ, ಉತ್ತರ ತಹಶೀಲ್ದಾರ್ ಕಚೇರಿಗೆ ಜನ ಅಲೆದು ಸುಸ್ತಾಗಿದ್ದಾರೆ. ಸಹಿ ಮಾಡದೆ ಜನರನ್ನು ಕಚೇರಿಗೆ ಅಲೆಸುತ್ತಿರುವುದು ಬೆಳಕಿಗೆ ಬಂದಿದ್ದು, ಹಣ ನೀಡದಿದ್ದರೆ ಸಹಿ ಹಾಕಲ್ಲ ಎಂದು ಜನ ದೂರು ನೀಡಿದ್ದಾರೆ.