

ಪುತ್ತೂರು: ಅಕ್ರಮ- ಸಕ್ರಮ ದರ್ಖಾಸ್ತು ಜಮೀನಿಗೆ ನಿರಾಕ್ಷೇಪಣಾ ಪತ್ರ ನೀಡಲು ೧೨ ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಪುತ್ತೂರು ತಹಸೀಲ್ದಾರ್ ಕಚೇರಿಯ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಪುತ್ತೂರು ತಹಸೀಲ್ದಾರ್ ಮೇಲೆ ಪ್ರಕರಣ ದಾಖಲಾಗಿದೆ.
ಭೂಸುಧಾರಣಾ ಶಾಖೆ ಕೇಸ್ ವರ್ಕರ್ ಸುನೀಲ್ ಮತ್ತು ತಹಸೀಲ್ದಾರ್ ಎಸ್.ಬಿ.ಕೂಡಲಗಿ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಶ್ವರಮಂಗಲದ ಅಜಿತ್ ಎಂಬುವರಿಂದ ಸುನೀಲ್ ೧೨ ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದಿದ್ದು, ನೌಕರನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಪುತ್ತೂರು ತಾಲೂಕು ತಹಸೀಲ್ದಾರರ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ.
ದೂರುದಾರರಿಗೆ ನೆಟ್ಟಣಿಗೆ ಮೂಡ್ನೂರಿನ ೬೫ ಸೆಂಟ್ಸ್ ಜಮೀನು ೨೭ ವರ್ಷದ ಹಿಂದೆ ಚಿಕ್ಕಪ್ಪನಿಗೆ ಮಂಜೂರಾಗಿದ್ದು, ವೀಲುನಾಮೆ ಮಾಡಿಡಲಾಗಿತ್ತು. ೨೦೨೪ರಲ್ಲಿ ತಹಸೀಲ್ದಾರರಿಂದ ಸಾಗುವಳಿ ಚೀಟಿ ಮೂಲಕ ಮಂಜೂರಾದ ಜಾಗ ಮಾರಾಟ ಮಾಡಲು ನಿರಾಕ್ಷೇಪಣಾ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು. ಜೂನ್ ೨೬ರಂದು ಪುತ್ತೂರು ತಹಸೀಲ್ದಾರ್ ಕಚೇರಿಯ ಭೂಸುಧಾರಣಾ ಶಾಖೆಯಲ್ಲಿ ನಿರಾಕ್ಷೇಪಣಾ ಪತ್ರದ ಬಗ್ಗೆ ವಿಚಾರಿಸಿದಾಗ ಕೇಸ್ ವರ್ಕರ್ ಸುನೀಲ್ ತಹಸೀಲ್ದಾರ್ ಸಹಿ ಬಾಕಿ ಇದೆ. ಅದಕ್ಕೆ ೧೦ ಸಾವಿರ ರೂ., ಮತ್ತೆ ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲೋಕಾಯುಕ್ತ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕಿ ಡಾ.ಗಾನಾ ಪಿ.ಕುಮಾರ್, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್., ರವಿ ಪವಾರ್ ಸಿಬ್ಬಂದಿ ಜತೆ ಕಾರ್ಯಾಚರಣೆ ಕೈಗೊಂಡಿದ್ದರು.