

ರಾಮನಗರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ನಿವೃತ್ತ ಇಂಜಿನಿಯರ್ ವಿ. ಪ್ರಕಾಶ್ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಸ್ನೇಹಾ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಸುಧೀರ್ ಮತ್ತು ಗೌತಮ್ ಅವರ ತಂಡವು ಬೆಳಗ್ಗೆ ರಾಮನಗರ ತಾಲೂಕಿನ ದೊಡ್ಡೇರಿಯಲ್ಲಿರುವ ಪ್ರಕಾಶ್ ಅವರ ಮನೆ, ಬೆಂಗಳೂರಿನ ಕೆವಿಕೆ ಬಡಾವಣೆ ಮತ್ತು ಮೈಸೂರಿನ ಜೆ.ಪಿ. ನಗರದಲ್ಲಿರುವ ಅವರ ಪುತ್ರಿಯರ ಮನೆ ಮೇಲೂ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ದಾಖಲೆಗಳ ಪರಿಶೀಲನೆ ನಡೆಸಿತು. ಆದಾಯ ಮೀರಿ ಆಸ್ತಿ ಹೊಂದಿದ ಆರೋಪದ ಮೇಲೆ ಪ್ರಕಾಶ್ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿತ್ತು. ಆ ಮೇರೆಗೆ ಪ್ರಕಾಶ್ ಮತ್ತು ಇಬ್ಬರು ಪುತ್ರಿಯರ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 8 ನಿವೇಶನ, ಬೆಂಗಳೂರು ರಾಮನಗರ ಸೇರಿ ವಿವಿಧೆಡೆ 6 ಮನೆ ಹಾಗೂ 6 ಎಕರೆ ಜಮೀನು ಹೊಂದಿರುವುದು ಪತ್ತೆಯಾಗಿದೆ. ಎಲ್ಲವನ್ನು ಲೆಕ್ಕ ಹಾಕಿದಾಗ ಆದಾಯ ಮೀರಿದ ₹3.77 ಕೋಟಿ ಆಸ್ತಿ ಕಂಡುಬಂದಿದ್ದು, ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಮೂರು ತಿಂಗಳ ಹಿಂದೆಯಷ್ಟೇ ಕೆಎಸ್‌ಆರ್‌ಟಿಸಿಯ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಸೇವೆಯಿಂದ ಪ್ರಕಾಶ್ ನಿವೃತ್ತರಾಗಿದ್ದರು.